ಬೊಗಳೆ ರಗಳೆ

header ads

ಹೆಗ್ಗಳಿಕೆಗೆ ಕಳಂಕ ಯತ್ನ : ಲಂಚಾವತಾರಿಗಳ ಆಕ್ರೋಶ

(ಬೊಗಳೂರು ಲಂಚಾವತಾರ ಬ್ಯುರೋದಿಂದ)
ಬೊಗಳೂರು, ಜ.29- ದೇಶದ ಅತ್ಯಂತ ಭ್ರಷ್ಟ ರಾಜ್ಯಗಳಲ್ಲೊಂದು ಎಂಬ ಹೆಗ್ಗಳಿಕೆಯನ್ನು ನಿವಾರಿಸಲು ಹುಟ್ಟಿಕೊಂಡಿರುವ ಸಂಘಟನೆ ವಿರುದ್ಧ ರಾಜ್ಯಾದ್ಯಂತ ಅಧಿಕಾರಿ ವರ್ಗವು ಸಿಡಿದೆದ್ದಿರುವುದಾಗಿ ವರದಿಯಾಗಿದೆ.

ದೇಶಾದ್ಯಂತ ಭ್ರಷ್ಟಾಚಾರವನ್ನು ಬೆಳೆಸಲು ಮತ್ತು ಅದನ್ನು ಸಂರಕ್ಷಿಸಲು ಏನೇನೆಲ್ಲಾ ಕಸರತ್ತು ಮಾಡುತ್ತಿರುವಾಗ ಈ ಪುಟಗೋಸಿ ಸಂಘಟನೆಗಳೆಲ್ಲಾ ತಲೆ ಎತ್ತಿ ಭ್ರಷ್ಟಾಚಾರ ನಿರ್ಮೂಲನೆ ಮಾಡುವುದಾಗಿ ಮತ್ತು ನೊಂದು ಬೆಂದ ಬಡ ಪ್ರಾಣಿಗಳಿಗೆ ನೆರವಾಗುವುದು ಯಾವ ನ್ಯಾಯ ಎಂದು ಅಖಿಲ ಭಾರತ ಭ್ರಷ್ಟಾಚಾರ ನಿಷೇಧ ವಿರೋಧಿ ಸಂಘಟನೆ ಕೂಗಾಡಿದೆ.

ಒಂದು ಕಡೆಯಿಂದ ಲೋಕಾಯುಕ್ತರನ್ನು ಛೂಬಿಟ್ಟು ನಮಗೆ ನೆಲೆ ಇಲ್ಲದಂತೆ ಮಾಡುವ ಯತ್ನಗಳು ನಡೆಯುತ್ತಿವೆ. ಮತ್ತೊಂದು ಕಡೆಯಿಂದ ಭ್ರಷ್ಟಾಚಾರದ ಕುರಿತು ಜನರ ತಲೆಯಲ್ಲಿ ಇಲ್ಲ ಸಲ್ಲದ ವಿಷಯ ತುಂಬಲಾಗುತ್ತಿದೆ. ಇದಕ್ಕೆ 'ಜನಜಾಗೃತಿ' ಎಂಬ ಪೊಳ್ಳು ಹೆಸರು ನೀಡಲಾಗುತ್ತಿದೆ. ಇಂಥ ಪರಿಸ್ಥಿತಿಯಲ್ಲಿ ನಾವು ಬದುಕುವುದಾದರೂ ಹೇಗೆ ಎಂದು ಈ ಅಧಿಕಾರಿವರ್ಗ ಪ್ರಶ್ನಿಸಿದೆ.

ಭ್ರಷ್ಟಾಚಾರಿ ಎಂಬ ಪೊಲೀಸರಿಂದ, ತನಿಖಾ ಮಂಡಳಿಗಳಿಂದ, ಲೋಕಾಯುಕ್ತರಿಂದ ತುಳಿತಕ್ಕೊಳಗಾದ ಸಮುದಾಯಕ್ಕೆ ಮೀಸಲಾತಿ ಕಲ್ಪಿಸಲು ನಾವು ಶ್ರಮ ವಹಿಸುತ್ತಿರುವಾಗ ಇಂಥ ವೇದಿಕೆಗಳು ತಲೆ ಎತ್ತಿ ನಾವು ತಲೆ ಎತ್ತದಂತೆ ಮಾಡುತ್ತಿವೆ ಎಂದು ಮುಖ್ಯಮಂತ್ರಿಗೆ ದೂರು ಸಲ್ಲಿಸಲು ನಿರ್ಧರಿಸಿರುವ ಸಂಘಟನೆ ಪದಾಧಿಕಾರಿ ಭ್ರಷ್ಟ ಕುಮಾರ್, ದೇಶಾದ್ಯಂತ ಲಂಚ ಆಂದೋಲನ ಆರಂಭಿಸುವುದಾಗಿ ಎಚ್ಚರಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

5 ಕಾಮೆಂಟ್‌ಗಳು

 1. ಸದ್ಯಕ್ಕೆ ಹದಿನೈದೇ ಕರೆಗಳು ಬರುತ್ತಿವೆಯಂತಲ್ಲಾ,ಲಂಚದ ಹಾವಳಿ ಅಷ್ಟೇನೂ ಹೆಚ್ಚಾಗಿಲ್ಲ ಅಂತಾಯ್ತು!

  ಇಲ್ಲಿಗೆ ಅರ್ಜಿ ಕೊಡಲು ಲಂಚ ಕೊಡಬೇಕಿಲ್ಲ ತಾನೇ?

  ಪ್ರತ್ಯುತ್ತರಅಳಿಸಿ
 2. ಲಂಚಾವತಾರಿಗಳೆಂದರೆ ಹಿರಣಯ್ಯನವರ ನಾಟಕದ ಪಾತ್ರಗಳೇ?

  ಅಂದಾಗೆ ನಮ್ಮವರಿಗೆ ಅಸೂಯೆ ಕಣ್ರೀ..ಯಾವುದೋ ಒಂದರಲ್ಲಿ ಮುಂದೆ ಬಂದರು ಅದನ್ನು ತಡೆಯೋಕೆ ಹೀಗೆ ಗುಂಪುಮಾಡಕೊಂಡು ಬಂದುಬಿಡ್ತಾರೆ

  ಪ್ರತ್ಯುತ್ತರಅಳಿಸಿ
 3. ಶ್ರೀತ್ರೀ ಅವರೆ,
  ನೀವು ಹೇಳಿದ 15 ಕರೆಗಳನ್ನು ಮಾಡಿದವರ ಬಾಯಿ ಮುಚ್ಚಿಸಲಾಗಿದೆ. ಅವರಿಗೂ ಅಷ್ಟೊ ಇಷ್ಟೋ ಪಾವತಿಸಲಾಗಿದೆ.


  ಈಗೇನಿದ್ದರೂ ನೇರ ಪಾವತಿ ವ್ಯವಸ್ಥೆ ಅಲ್ಲ. ಲಂಚವನ್ನೂ BPO ಉದ್ಯಮವಾಗಿ ಮಾಡಲಾಗುತ್ತಿದ್ದು, ಎಲ್ಲವೂ ಕ್ರೆಡಿಟ್ ಕಾರ್ಡಿನಲ್ಲೇ ನಡೆಯುತ್ತದೆ. ಕ್ರೆಡಿಟ್ ಕಾರ್ಡನ್ನು ಒರೆಸಿಬಿಟ್ಟರೆ ಆಯಿತು. ಲಂಚ ಕೊಡಬೇಕಿಲ್ಲ!

  ಪ್ರತ್ಯುತ್ತರಅಳಿಸಿ
 4. ಶಿವ್ ಅವರೆ,
  ಲಂಚಾವತಾರಿಗಳೆಂದರೆ, ಲಂಚದ ಆಯಾಮವನ್ನು ಸಮಗ್ರವಾಗಿ ಜನರ ಮುಂದಿಟ್ಟ ಹಿರಣ್ಣಯ್ಯನವರ ಕೊಲೆಗೆ ಯತ್ನಿಸಿದವರು ಎಂಬುದನ್ನು ಪತ್ತೆ ಹಚ್ಚಲಾಗಿದೆ.

  ಪ್ರತ್ಯುತ್ತರಅಳಿಸಿ
 5. ಶ್ರೀನಿವಾಸರೆ,
  ನಿಮ್ಮ ಶೀರ್ಷಿಕೆಯನ್ನು ಪರಾಮರ್ಶೆಗಾಗಿ ಮೇಲಧಿಕಾರಿಗಳಿಗೆ ಕಳುಹಿಸಲಾಗಿದೆ. ಅವರು ಒಂದಿಷ್ಟು ಕೇಳಬಹುದು. ಸುಧಾರಿಸಿಕೊಳ್ಳಿ.

  ಪ್ರತ್ಯುತ್ತರಅಳಿಸಿ

ಏನಾದ್ರೂ ಹೇಳ್ರಪಾ :-D