ಬೊಗಳೆ ರಗಳೆ

header ads

ಮಾತು ಮದಿರೆಯೇ ಮಾನಿನಿಯರಿಗೆ ?

(ಬೊಗಳೂರು ಮೌನ ಬ್ಯುರೋದಿಂದ)
ಬೊಗಳೂರು, ಡಿ.12- ಬೊಗಳೆ ರಗಳೆ ಬ್ಯುರೋದ ಕೆಲಸವನ್ನು ಬೇರೆಯವರಾರೋ ಮಾಡಿರುವುದರಿಂದಾಗಿ ಬೆಚ್ಚಿ ಬಿದ್ದ ಬ್ಯುರೋ ಸಿಬ್ಬಂದಿ ಚೇತರಿಸಿಕೊಳ್ಳುವ ಯತ್ನ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.

ಸ್ತ್ರೀಯರು ಪುರುಷರಿಗಿಂತ ಬರೇ ಮೂರು ಪಟ್ಟು ಮಾತ್ರವೇ ಹೆಚ್ಚು ಮಾತನಾಡುತ್ತಾರೆ ಎಂದು ಸಂಶೋಧನಾ ವರದಿಯೊಂದು ತಿಳಿಸಿರುವುದು ಇಲ್ಲಿ ಪ್ರಕಟವಾಗಿದೆ. ಪುರುಷರು ದಿನಕ್ಕೆ 7 ಸಾವಿರ ಅಣಿ ಮುತ್ತುಗಳನ್ನು ಉದುರಿಸಿದರೆ, ಸ್ತ್ರೀಯರು ಕೇವಲ 20 ಸಾವಿರ ಮಾತ್ರವೇ ಶಬ್ದಗಳನ್ನು ಉದುರಿಸುತ್ತಾರೆ. ಹಾಗಾಗಿ ಪುರುಷರಿಗೆ ಈ ಅಣಿಮುತ್ತುಗಳನ್ನು ಹೆಕ್ಕಿಕೊಳ್ಳುವುದರಲ್ಲೇ ಸಮಯ ತಗುಲುತ್ತದೆ ಎಂಬ ಅಂಶವನ್ನು ಮಾತ್ರವೇ ಬೊಗಳೆ ರಗಳೆ ಬ್ಯುರೋ ತನಿಖೆ ನಡೆಸಿ ಹೆಕ್ಕಿಕೊಂಡಿದೆ.

ಆದರೆ ಮಾತುಗಾರಿಕೆ ಎಂಬುದು ಮಹಿಳೆಯರಿಗೆ ಮಾದಕ ದ್ರವ್ಯವಿದ್ದಂತೆ ಎಂದು ಹೇಳಿರುವುದರ ಹಿನ್ನೆಲೆಯನ್ನು ಪತ್ತೆ ಹಚ್ಚಲು ಬೊಗಳೆ ರಗಳೆ ಬ್ಯುರೋಗೆ ಸಾಧ್ಯವೇ ಆಗಲಿಲ್ಲ.

ಬಹುಶಃ ಸಂಶೋಧಕರು, ಆಗಾಗ್ಗೆ ಅಣಿಮುತ್ತು ಉದುರಿಸಿ, ಬೊಂಬಾಯಿಗರಾಗಿ ವಿವಾದಕ್ಕೆ ಸಿಲುಕುತ್ತಿರುವ ಜಯಶಬರಿಮಾಲರಂತಹ ಹೀರೋಯಿನ್‌ಗಳನ್ನು ಹೆರಾಯ್ನ್ ಎಂದು ತಪ್ಪು ತಿಳಿದುಕೊಂಡಿರಬಹುದೇ ಎಂಬ ಒಂದೇ ಒಂದು ಶಂಕೆ ಕಾಡಿದೆ.

ಈ ಮಧ್ಯೆ, ಸ್ತ್ರೀಯರ ಮಾತಿನ ಧಾವಂತಕ್ಕೆ ಅಷ್ಟಪಥದ ಎಕ್ಸ್‌ಪ್ರೆಸ್ ಹೆದ್ದಾರಿ ಇದ್ದರೆ, ಪುರುಷರ ಮಾತಿಗೆ ಹಳ್ಳಿಗಾಡಿನ ರಸ್ತೆಯೇ ಗತಿ ಇದೆ ಎಂದು ಹೋಲಿಕೆ ನೀಡಲಾಗಿರುವುದು ಪುರುಷರನ್ನು ಕೆರಳಿಸಿದೆ ಎಂದು ತಿಳಿದುಬಂದಿದೆ.

ಎಕ್ಸ್‌ಪ್ರೆಸ್ ಹೆದ್ದಾರಿಗಳಲ್ಲಿ ಗಾಡಿ ಸುಲಲಿತವಾಗಿ ಓಡಿಸಬಹುದು, ಆದರೆ ಹಳ್ಳಿಯ ಹೊಂಡಾಗುಂಡಿ ತುಂಬಿದ ರಸ್ತೆಗಳು ನಮಗೆ ಬೇಡ ಎಂಬುದು ಅವರ ಒಕ್ಕೊರಲ ಕೂಗಾಟವಾಗಿದೆ. ಹಾಗಾಗಿ ಈ ಸಂಶೋಧನೆ ನಡೆಸಿರುವುದು ಒಬ್ಬ ಸ್ತ್ರೀಯೇ ಆಗಿರುವುದರಿಂದ ಪುರುಷರು ಕೂಡ ಪ್ರತಿ-ಸಂಶೋಧನೆಗೆ ಸಜ್ಜಾಗಿದ್ದಾರೆ ಎಂದು ತಿಳಿದುಬಂದಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

6 ಕಾಮೆಂಟ್‌ಗಳು

 1. ಮಾತು ಬೆಳ್ಳಿ ಮೌನ ಬಂಗಾರ ಎನ್ನುವ ನಾಡು ನುಡಿಗೆ ಇನ್ನೊಂದು ಹೊಸ ಸೇರ್ಪಡೆ - ಮಾತು ಮಾನಿನಿಯರ ಮದಿರೆ. ಅತ್ಯುನ್ನತ ಸಂಶೋಧನೆಗೆ ಎಂತಹ ಏಟನ್ನು ಕೊಡಬಹುದು, ಯಾರಿಂದ ಕೊಡಿಸಬಹುದು ಎಂಬುದನ್ನೂ ನೀವೇ ತಿಳಿಸಿಬಿಡಿ. ಅಂದ ಹಾಗೆ ಮಾನಿನಿಯರು ಮಾತಾಡ್ತಾ ಮಾತಾಡ್ತಾ ತೂರಾಡ್ತಾರಾ?

  ಪ್ರತ್ಯುತ್ತರಅಳಿಸಿ
 2. ಇವತ್ತಿನ (ಮಂಗಳವಾರ ಡಿ.೧೨) ವಿಜಯಕರ್ನಾಟಕದಲ್ಲಿ ಎಚ್.ಡುಂಡಿರಾಜ್ ಅಂಕಣದಿಂದ ಉದ್ಧೃತ ಸಾಲು ಇದು (ಅವರಿಗೆ ಓದುಗರೊಬ್ಬರು ಕಳಿಸಿದ್ದಂತೆ):

  "ಗಂಡಸರು ಒಂದು ಕಿವಿಯಿಂದ ಕೇಳಿ ಇನ್ನೊಂದು ಕಿವಿಯಿಂದ ಬಿಡುತ್ತಾರಾದರೆ ಹೆಂಗಸರು ಎರಡೂ ಕಿವಿಗಳಿಂದ ಕೇಳಿ ಬಾಯಿಂದ ಬಿಡುತ್ತಾರೆ".

  ಪ್ರತ್ಯುತ್ತರಅಳಿಸಿ
 3. ಮಾವಿನಯನಸರೆ,

  ಮಾನಿನಿಯರು ಮಾತಾಡ್ತಾ ಮಾತಾಡ್ತಾ ತೂರಾಡ್ತಾರೆಯೇ ಎಂದು ನೋಡಲು ಹೋದವರ ತಲೆಯಲ್ಲೊಂದು ಪರ್ವತ ಮೊಳಕೆಯೊಡೆದಿದೆ ಅಂತ ಗೊತ್ತಿಲ್ಲವೇ ನಿಮಗೆ?
  ನಿಮ್ಮ ತಲೆ ರಕ್ಷಿಸಿಕೊಳ್ಳಿ.

  ಪ್ರತ್ಯುತ್ತರಅಳಿಸಿ
 4. ಜೋಷಿಯವರೆ,

  ಡುಂಡಿರಾಜ್ ಅವರ ಕಿವಿಗೆ ನೀವು ಕೂಡ ಊದಿದ್ದೀರಿ. ಹಾಗಾಗಿಯೇ ಅವರು ಅಷ್ಟುದ್ದ ಕಿವಿ ಎಳೆದದ್ದು.

  ಮಾತ್ರವಲ್ಲ ಅವರ ಕಿವಿಗೆ ನೀವು ಕಪ್ಪೆಗಳನ್ನೂ ಹಾಕಿಬಿಟ್ಟಿದ್ದೀರಿ!

  ಪ್ರತ್ಯುತ್ತರಅಳಿಸಿ
 5. ಸ್ತ್ರೀಯರು 20,000 ಮಾತ್ರ ಮಾತಾಡೋದಾ??? ಈ ಸಂಶೋಧನೆ ಸರಿ ಯಾಗಿರಲಾರದು. ಇದರ ಬಗ್ಗೆ ಅನ್ವೇಷಿಗಳಿಂದಲೇ ತನಿಖೆಯಾಗಲಿ.

  ಪ್ರತ್ಯುತ್ತರಅಳಿಸಿ
 6. ಶ್ರೀ ತ್ರಿ ಅವರೆ,
  ಅದು ಶಬ್ದಗಳ ಬದಲು ವಾಕ್ಯ ಎಂದಾಗಬೇಕಿತ್ತೇ? ನಮ್ಮ ಬ್ಯುರೋ ಸಿಬ್ಬಂದಿಯಿಂದ ತಪ್ಪಾಗಿದ್ದರೆ ಮತ್ತೆ ಮತ್ತೆ ಅನ್ವೇಷಿಸಲು ಆರ್ಡರಿಸಲಾಗಿದೆ.

  ಪ್ರತ್ಯುತ್ತರಅಳಿಸಿ

ಏನಾದ್ರೂ ಹೇಳ್ರಪಾ :-D