(ಬೊಗಳೆ ರಗಳೆ ಬ್ಯುರೋದಲ್ಲಿ ಭವಿಷ್ಯವಾಣಿಯಿಲ್ಲದೆ ನಮಗೆ ಭವಿಷ್ಯವೇ ಇಲ್ಲ ಎಂಬ ಓದುಗರ ದೂರಿನ ಹಿನ್ನೆಲೆಯಲ್ಲಿ ಇದೋ ಮತ್ತೊಮ್ಮೆ ಭವಿಷ್ಯ ನುಡಿಯಲಾಗುತ್ತಿದೆ. ನಿಮ್ಮ ಭವಿಷ್ಯ ನಮ್ಮ ಕೈಯಲ್ಲಿ, ನಮ್ಮ ಭವಿಷ್ಯ ನಿಮ್ಮ ಕೈಯಲ್ಲಿ!)
ಮೇಷ: ಅನಗತ್ಯ ಕಾರುಬಾರುಗಳಿಗೆ ಧನ ವ್ಯಯವಾಗುತ್ತದೆಯಾದರೂ, ಕಾರಿಗಿಂತಲೂ ಬಾರಿಗೇ ಹೆಚ್ಚು ಖರ್ಚು ಮಾಡುವ ಸಾಧ್ಯತೆಗಳಿವೆ.
 
ವೃಷಭ: ನಿಮ್ಮ ಒಡಹುಟ್ಟಿದವರೊಬ್ಬರು ನಾನೇ ನಿಮ್ಮ ಸೋದರ ಅಂತ ಹೇಳಿಕೊಳ್ಳುವುದು ನಿಮಗೆ ಕಿರಿಕಿರಿಯಾಗಬಹುದು. ನಿಜವಾಗಿರುವುದರಿಂದ ಸಹಿಸಿಕೊಳ್ಳುವುದು ಅನಿವಾರ್ಯ.
 
ಮಿಥುನ: ಹಿತಶತ್ರುಗಳ ಆಗಮನ, ಪುಷ್ಕಳ ಭೋಜನ, ಅವರು ಹಿಂದೆ ಹೋದ ಬಳಿಕ ನೋಡಿದಾಗ ನಿಮ್ಮ ಪರ್ಸು ಖಾಲಿ. ಮತ್ತೊಂದು ವಿದೇಶೀ ಗಡಿಯಾರವೂ ನಾಪತ್ತೆಯಾಗಿರಬಹುದು.
 
ಕಟಕ: ವಾತಾವರಣದಲ್ಲಿ ಉಷ್ಣತೆ ಹೆಚ್ಚುವುದರಿಂದ ನಿಮಗೂ ಸೆಕೆಯಾಗಬಹುದು. ಸೆಕೆಯಾಗದಿದ್ದರೆ ಜ್ವರವಿರುವ ಬಗ್ಗೆ ವೈದ್ಯರನ್ನು ಕಾಣುವುದೊಳಿತು.
 
ಸಿಂಹ: ನೆಂಟರ ಆಗಮನದಿಂದ ಉಲ್ಲಾಸವಿರುತ್ತದಾದರೂ, ಅವರು ಎಷ್ಟು ದಿನ ಠಿಕಾಣಿ ಹೂಡುವರು ಎಂಬುದೇ ನಿಮ್ಮ ಯೋಚನೆಗೆ ಕಾರಣವಾಗಬಹುದು.
 
ಕನ್ಯಾ: ಮಂಗಳ ಕಾರ್ಯದಲ್ಲಿ ಮಾಜಿ ಗೆಳತಿ ಮಂಗಳಾ ಭೇಟಿಯಾಗುವುದರಿಂದ ಪತ್ನಿಯ ಬಾಯಿಂದ ಅಮಂಗಳ ಮಾತು ಬರಬಹುದು.
 
ತುಲಾ: ನೀವು ಮಧ್ಯ ವಯಸ್ಕರಾಗಿದ್ದರೆ, ವಯಸ್ಕರಂತೆಯೇ ಮದ್ಯ ಸೇವನೆಯೂ ಅಷ್ಟೇ ಪ್ರಮಾಣದಲ್ಲಿರುವುದು. ಬರೇ ಪಬ್ಬಿಗೆ ಹೋಗುವ ವಯಸ್ಸು ನಿಮ್ಮದಲ್ಲದಿದ್ದರೆ ಬಾರ್ ನೋಡಬಹುದು.
 
ವೃಶ್ಚಿಕ: ನೀವು ಮುಂಗೋಪಿಗಳಾಗಿದ್ದರೆ ಆಗಾಗ್ಗೆ ಸಿಡುಕುವಿರಿ. ಅಲ್ಲದಿದ್ದರೂ ಕೋಪ ಬಂದಾಗ ಬಯ್ಯುವಿರಿ.
 
ಧನು: ನೀವು ವಾಚಾಳಿಗಳಾಗಿದ್ದರೆ, ತಿನ್ನುವುದರ ಬಗ್ಗೆ ವಿಶೇಷ ಆಸಕ್ತಿ. ಜೋರು ಹಸಿವಾದಾಗಲೆಲ್ಲಾ ಇತರರ ತಲೆ ತಿನ್ನುವಿರಿ.
 
ಮಕರ: ನಿಮಗೆ ಹಣವೇ ಎಲ್ಲವೂ ಆಗಿರುವುದರಿಂದ ನೀವು ರಾಜಕಾರಣಿಗಳಾಗಿ, ವರದಿಗಾರರಾಗಿ, ಪೊಲೀಸ್ ಅಧಿಕಾರಿಯಾಗಿ, ಸರಕಾರಿ ಅಧಿಕಾರಿಗಳು, ಟ್ರಾಫಿಕ್ ಪೊಲೀಸರು ಆಗಲು ಲಾಯಕ್ಕು.
 
ಕುಂಭ: ನಿಮಗೆ ಉತ್ತಮ ಗ್ರಹಣ ಶಕ್ತಿ ಇರುವುದರಿಂದ ಚಂದ್ರ ಗ್ರಹಣ, ಸೂರ್ಯ ಗ್ರಹಣ ಬಗ್ಗೆ ಎಚ್ಚರದಿಂದಿರಿ.
 
ಮೀನ: ನೀವು ಹುಟ್ಟಿದ ಬಳಿಕ ಕೌಮಾರ್ಯಕ್ಕೆ, ನಂತರ ಯೌವನಕ್ಕೆ, ಆ ಬಳಿಕ ಗೃಹಸ್ಥಾಶ್ರಮಕ್ಕೆ ಕಾಲಿಡುವಿರಿ. ಮಧ್ಯ ವಯಸ್ಸು ಕಳೆದ ಬಳಿಕ ವೃದ್ಧರಾಗಲಾರಂಭಿಸುವಿರಿ.

4 Comments

ಏನಾದ್ರೂ ಹೇಳ್ರಪಾ :-D

 1. ರಾಶಿ ಭವಿಷ್ಯ ಓದುತ್ತಿದ್ದರೆ ರಾಶಿ ರಾಶಿ ೫೦:೫೦ ಬಿಸ್ಕತ್ತುಗಳನ್ನು ತಿಂದ ಅನುಭವ ಆಗುತ್ತಿದೆ.

  ನನಗೆ ಹಿತಶತ್ರುಗಳಿಂದ ಏನೇ ಆದರೂ ಪರವಾಗಿಲ್ಲ, ಪುಷ್ಕಳ ಭೋಜನ ಸಿಕ್ಕಿದರಾಯ್ತು. ಉಂಡ ಕೂಡಲೇ ಕಂಡಲ್ಲಿ ಮಲಗು ಎಂದು ಸರ್ವಜ್ಞ.

  ReplyDelete
 2. ವಾತವರಣದಲ್ಲಿ ಸೆಕೆಯೇ?? ಈ ಊರಿಗೆ ಬಂದಾಗಿನಿಂದ ಬರಿ ಚಳಿ, ಮಳೆ ಅಷ್ಟೆ. ಸೆಕೆ ಅನ್ನುವುದು ಮರೆತೇ ಹೋಗಿದೆ :( ಹಾಗಿದ್ದರೆ ಈ ಭವಿಷ್ಯ ಸುಳ್ಳೇ?? ಅನ್ವೇಷಿಗಳಿಗೆ ಕೇಳಬೇಕು.

  ReplyDelete
 3. ಅಬ್ಬ ಮಾವಿನಯನಸರೆ,
  ನಿಮ್ಮ ಸಂಶೋಧನೆ ಅದ್ಭುತ.
  ಈ ರಾಶಿಯ ಮಧ್ಯೆ ಬಿಸ್ಕಿಟ್ ಪ್ಯಾಕೆಟ್ ಹೆಕ್ಕಿಕೊಂಡು ತಿಂದ್ರಲ್ಲಾ...!

  ಕಂಡಲ್ಲಿ ಗುಂಡಿಕ್ಕಲು ಮಾತ್ರ ಹೋಗದಿರಿ!

  ReplyDelete
 4. ಅನಾನಿಮಸ್ ಗಿರಿಯವರೆ!

  ಒಂದು ವಾಕ್ಯ ಬಿಟ್ಟೋಗಿದೆ.

  ವಾತಾವರಣದಲ್ಲಿ ಚಳಿ ಇದ್ದರೆ, ನಿಮಗೂ ಚಳಿಯಾಗಬಹುದು.

  ತಡೆದುಕೊಳ್ಳಲು ಅಸಾಧ್ಯವಾದರೆ ಒಲೆಯೊಳಗೆ ತೂರಿಕೊಳ್ಳಬಹುದು!!!!

  ReplyDelete

Post a Comment

ಏನಾದ್ರೂ ಹೇಳ್ರಪಾ :-D

Previous Post Next Post