ಜ್ಜಯಿನಿ ಮಹಾಕಾಲ ಮಂದಿರದ ಕೋಟಿತೀರ್ಥ ಸರೋವರದ ಮಧ್ಯಭಾಗದಲ್ಲಿ ಹೌದೋ ಅಲ್ಲವೋ ಎಂಬಷ್ಟು ಮೆಲ್ಲಗೆ ತೇಲುವ ಚೌಕಾಕಾರದ ತೇಲುತೊಟ್ಟಿಲಲ್ಲಿ ಗಿಡಮರಗಳಿದ್ದವು. ಅದು ತೇಲುತ್ತಾ ಇದೆ ಅಂತ ಹೇಳಿದರೆ ಇವನಿಗೇನೋ ತಲೆ ಕೆಟ್ಟಿರಬೇಕು ಎಂದು ಯಾರಾದರೂ ಅಂದುಕೊಂಡರೆ ಎಂದು ಯೋಚಿಸಿ ಸುಮ್ಮನಾದೆ.
 
ಜ್ಯೋತಿರ್ಲಿಂಗದತ್ತ ಸಾಗುವ ಪ್ರತಿಯೊಂದು ಹೆಜ್ಜೆ ಹೆಜ್ಜೆಗೂ ದೇವರ ಮೂರ್ತಿಗಳು, ಅಲ್ಲಲ್ಲಿ ಸುಲಿಯುವ ಅರ್ಚಕರ ಗಡಣ, ಅಭಿಷೇಕ ಮಾಡಿಸುತ್ತೇವೆ, ಪೂಜೆ ಮಾಡಿಸುತ್ತೇವೆ ಎಂಬಿತ್ಯಾದಿ ಹೇಳಿಕೆ ನೀಡಿ ಮುಂದೆ ಕಾಡುತ್ತಿರುತ್ತಾರೆ.
 
ಲಿಂಗವಿರುವ ಸ್ಥಳಕ್ಕೆ ಹೋದಾಗ, ಎಲ್ಲರೂ ಆ ಶಿವಲಿಂಗದ ಮೇಲೆ ಬಿದ್ದು ಹೊರಳಾಡುತ್ತಿರುವಂತೆ ಕಂಡಿತು. ಅಲ್ಲಲ್ಲ... ಲಿಂಗವನ್ನು ಮುಟ್ಟಿ, ಅದಕ್ಕೆ ಹೂವು, ಹಣ್ಣು ಹಾಕಿ, ತಾವೇ ಅಭಿಷೇಕ ಮಾಡಿ ಎಲ್ಲಾ ಭಕ್ತಾದಿಗಳು ತಮ್ಮತಮ್ಮನ್ನು ಪುನೀತರಾಗಿಸಿಕೊಳ್ಳುತ್ತಿದ್ದರು. ಮತ್ತೆ ಕೆಲವರು ಜೋರಾಗಿ ಅಭಿಷೇಕದ ಚೊಂಬನ್ನು ಬೀಸುತ್ತಾ ಅಕ್ಕಪಕ್ಕದಲ್ಲಿದ್ದವರನ್ನೂ ಪುನೀತರಾಗಿಸುತ್ತಿದ್ದರು.
 
ಆಗ ರಾವಣೇಶ್ವರನು ಗೋವಿನ ಕಿವಿ ಹೋಲುವಂತೆ ತಿರುಚಿದ ಈಶ್ವರನ ಆತ್ಮಲಿಂಗವಿದ್ದ ಪ್ರದೇಶ, ನಮ್ಮ ಕರುನಾಡಿನ ಗೋಕರ್ಣವನ್ನು ನೆನಪಿಸಿದರು ಇಲ್ಲಿನ ಅರ್ಚಕರು. ನಾನು ಹೋದ ತಕ್ಷಣ, ಆಯಿಯೇ, ಆಯಿಯೇ, ಆಪ್‌ಕಾ ಶುಭ ನಾಮ್, ನಕ್ಷತ್ರ್, ಗೋತ್ರ್ ಬತಾಯಿಯೇ ಎಂದು ಕೈ ಹಿಡಿದು ಎಳೆದು ನಿಲ್ಲಿಸಿಯೇಬಿಟ್ಟರು. ತಡಬಡಿಸಿದ ನನ್ನ ಬಾಯಿಂದ ಏನು ಉದುರಿತೋ ಗೊತ್ತಿಲ್ಲ, ಅದನ್ನೇ ಹೆಕ್ಕಿಕೊಂಡು ತನ್ನ ಮಂತ್ರದೊಂದಿಗೆ ಜೋಡಿಸಿದ ಆ ಆರ್ಚಕ ಮಹಾಶಯರು, ಆಪ್‌ಕಾ ಪಾಪ್ ಪರಿಹಾರ್ ಹೋಗಯಾ, ಯಥಾಶಕ್ತಿ ಕುಛ್ ದೇ ದೀಜಿಯೇ ಎಂದು ಕೇಳಿಯೇಬಿಟ್ಟರು!
 
ಖಂಡಿತವಾಗಿಯೂ ಅವರು ಪಾಪ ಕಟ್ಟಿಕೊಳ್ಳುತ್ತಿದ್ದಾರೆ ಎಂಬುದು ತಿಳಿದಿದ್ದು ಆಗಲೇ! ಅಂದರೆ ನಮ್ಮ ಪಾಪ ಪರಿಹಾರ ಮಾಡಿ, ಅದನ್ನು ಆತನ ತಲೆಗೇರಿಸಿಕೊಂಡು ದುಡ್ಡು ಕಿಸೆಗೆ ಇಳಿಸಿಕೊಳ್ಳುವುದು!
 
ಗೋಕರ್ಣದಲ್ಲಿ ತೀರ್ಥ ಬೇಕಿದ್ರೆ 2 ರೂ., ಗಂಧ ಬೇಕಿದ್ರೆ 5 ರೂ. ಕೊಡಬೇಕು ಅಂತ ಸುಮಾರು 10-15 ವರ್ಷಗಳ ಹಿಂದೆಯೇ ಹೋಗಿದ್ದಾಗ ಅರ್ಚಕರು ಕೇಳಿದ್ದ ವಿಷಯ ನೆನಪಾಯಿತು. ಈಗ ಕಾಲ ಬದಲಾಗಿದೆ, ಅಲ್ಲಿ ಆ ತೀರ್ಥ-ಪ್ರಸಾದದ ಮೌಲ್ಯವೂ ಹೆಚ್ಚಾಗಿದ್ದಿರಬಹುದು.
 
ಆಯಿತು, ಪೂಜೆ ಮಾಡಿದ ಮಹಾಶಯ ಅಲ್ಲಿ ರಾಶಿಹಾಕಲಾಗಿದ್ದ ಹಣದಲ್ಲಿ ಚಿಲ್ಲರೆ ಹಣವನ್ನೆಲ್ಲಾ ಎಲ್ಲೋ ಅಡಗಿಸಿಟ್ಟು, ಕೆಲವೇ ಕೆಲವು 10 ರೂ. ನೋಟು, ಉಳಿದಂತೆ 50, 100, 500ರ ನೋಟು ಇರುವಂತೆ ನೋಡಿಕೊಂಡಿದ್ದ. ಅದನ್ನು ತೋರಿಸಿ ಕುಛ್ ಡಾಲ್ ದೀಜಿಯೇ ಎನ್ನುತ್ತಿದ್ದ. ಇದು ಕೂಡ ದೊಡ್ಡ ನೋಟನ್ನು ನಮ್ಮ ಕೈಯಿಂದ ಇಳಿಸುವ ತಂತ್ರಗಳಲ್ಲೊಂದು.
 
ಹೋಗಲಿ ಅಂತ, ಕಿಸೆಯೆಲ್ಲಾ ತಡಕಾಡಿ ಒಂದೆರಡು ನಾಣ್ಯಗಳನ್ನು ಎತ್ತರದಿಂದ ಠಣ್ ಎಂಬ ಸದ್ದು ಕೇಳಿಸುವಂತೆ ಹಾಕಿಬಿಟ್ಟೆ.
ಆಗ ನಿಜಕ್ಕೂ ಈ ರುದ್ರನ ನಾಡಿನಲ್ಲಿ ರೌದ್ರಾವತಾರ ದರ್ಶನವಾಗಿದ್ದು! ಅತನ ಕಣ್ಣುಗಳು ರುದ್ರನ 3ನೇ ಚಕ್ಷು ತೆರೆದರೆ ಹೇಗಿರುತ್ತಿತ್ತು ಎಂಬುದನ್ನು ತೋರಿಸಿತು. ಧನ್ಯೋಸ್ಮಿ, ಮಹಾಕಾಲೇಶ್ವರ ಮಂದಿರದಲ್ಲಿ ಮಹಾ ಕಾಲನ ದರ್ಶನವಾಯಿತು ಎಂದುಕೊಂಡು ಆತನ ಮುಸುಡು ನೋಡದೆ ಹೊರಬಂದೆ.
 
ಅಂತೂ ಕ್ಯೂ ಎಲ್ಲೆಲ್ಲೋ ಸುತ್ತಿ ಬಳಸಿ ಸಾಗಿದ ಕಾರಣ, ನಾವು ನೋಡಿದ ಜ್ಯೋತಿರ್ಲಿಂಗ ಎಲ್ಲಿ ಇದ್ದದ್ದು ಎಂಬುದೇ ಮರೆತುಹೋಗಿತ್ತು! ಎಲ್ಲಿಂದ ಹೊರಗೆ ಹೋಗುವುದು ಎಂಬುದು ಗೊತ್ತಾಗದೆ ತಡಬಡಿಸಬೇಕಾಯಿತು. ಮುಂದೆ ಯಾವುದೇ ಸುಲಿಗೆ ಕೇಂದ್ರಗಳಿರುವುದು ಸಾಧ್ಯವಿಲ್ಲದ್ದರಿಂದ ಅಲ್ಲಿ ಯಾರೂ ಕೂಡ ನಮ್ಮನ್ನು ಹಚ್ಚಿಕೊಳ್ಳುವವರೇ ಇಲ್ಲ! ಅಂತೂ ಉಳಿದವರನ್ನು ಹಿಂಬಾಲಿಸಿ ಮಂದಿರದಿಂದ ಹೊರಬಿದ್ದೆ.
 
ನಾನು ಕಂಡುಕೊಂಡ ಅಂಶವೆಂದರೆ, ಹೊಸ ಉದ್ಯೋಗ ಯೋಜನೆಯೊಂದು ಸೃಷ್ಟಿಯಾಗುತ್ತಿದೆ. ಇಲ್ಲಿ ಉತ್ತಮ Communication Skill ಇರೋರಿಗೆ, ಬಾಯಲ್ಲಿ ಬೆಣ್ಣೆ ಇಟ್ಟುಕೊಳ್ಳೋರಿಗೆ ಉತ್ತಮ ಅವಕಾಶಗಳಿವೆ. ವಿದ್ಯೆ ಬೇಡ, ಒಂದಷ್ಟು "ಮಹಾದೇವ ಪ್ರೀತ್ಯರ್ಥೇ... ರುದ್ರಾಭಿಷೇಕ ಕಾರಯಿಷೇ" ಎಂದು ಹೇಳಲು ಗೊತ್ತಿದ್ದರೆ ಸಾಕು.
 
(ನಾಳೆ ಕೊನೆಯ ಕಂತಿನಲ್ಲಿ ಕೃಷ್ಣ ಬಲರಾಮರು ಎಲ್‌ಕೆಜಿ ಕಲಿತ ಶಾಲೆ, ವಿಸ್ಕಿ ಕುಡಿಯುವ ದೇವರು... ಇತ್ಯಾದಿ)

6 Comments

ಏನಾದ್ರೂ ಹೇಳ್ರಪಾ :-D

 1. ಹೊಸ ಉದ್ಯೋಗ ಯೋಜನೆಯೊಂದು ಸೃಷ್ಟಿಯಾಗುತ್ತಿದೆ.....
  - ಎಂದು ಹಳೆಯ ವಿಷಯವನ್ನೇ ಹೊಸದೆಂದು ಬುರುಡೆ ಬಿಡುತ್ತಿರುವ ನಿಮ್ಮನ್ನು ನೋಡಿ ಅಳಬೇಕೋ,ನಗಬೇಕೋ ತಿಳಿಯದಿದ್ರೂ, ನಗುವುದೇ ಮೇಲು ಅನ್ನಿಸ್ತಾ ಇದೆ.

  ReplyDelete
 2. ಶ್ರೀ ತ್ರೀ ಅವರೆ,
  ಅಳುವ ಬದಲು ನಗುವುದು ಸುಲಭ, ನಗಿಸುವುದು ಮತ್ತೂ ಸುಲಭ ಅಂತ ನಮ್ಮ ಕ್ರಿಕೆಟ್ ತಂಡ ತೋರಿಸಿಕೊಟ್ಟ ಕಾರಣ ನಿಮ್ಮ ಆಯ್ಕೆ ಮೆಚ್ಚಬೇಕಾದ್ದೇ.

  ಗಹಗಹಿಸಿ ನಕ್ಕರದೇ ಭಾಗ್ಯ ಅಂತ ಹಿರಿಯರು ಹೇಳಿದ್ದಾರೆ!

  ReplyDelete
 3. ಓ,

  ೩ನೆ ಕಂತು ಬಂದೆ ಬಿಟ್ಟಿದೆ.
  ಗೋಕರ್ಣದಲ್ಲಿ ಮಾತ್ರ ಬಹಳ ತೊಂದ್ರೆ ಕೊಡ್ತಾರೆ.
  ಇಲ್ಲಿಯು ಕೂಡ ಹಾಗೆ ಮಾಡುವುದು ಕಂಡರೆ, ಅರ್ಚಕರು, ಎಷ್ಟು ಹೀನಯ ಬದು ಬದುಕುತ್ತಿದ್ದರೆ ಅಂತ ಗೊತ್ತಗುತ್ತೆ.

  ಭೂತಾರಧಕರೆ ವಾಸಿ, ಹೆದರಿಸಿಯಾರು ದುಡ್ ಮಾಡ್ಕೊತವೆ.

  ಇಂತಿ
  ಭೂತಪ್ಪ

  ReplyDelete
 4. ಭೂತಪ್ಪನವರ್ ಅವರೆ!

  ಅರ್ಚಕರ ಹೀನಾಯ ಬದುಕಿನ ಬಗ್ಗೆ ನಮ್ಮ ಕಣ್ಣು ತೆರೆಸಿದ್ದಕ್ಕೆ ಧನ್ಯವಾದ.

  ನಿಮ್ಮ ಆರಾಧಕರು ಎಲ್ಲಿದ್ದಾರೆ ;)

  ReplyDelete
 5. (ತಡವಾಗಿ ಓದಿರುವೆ.... :-))

  ಲೇಖನ ಚೆನ್ನಾಗಿದೆ.....

  ReplyDelete
 6. ಅನ್ನಪೂರ್ಣ ಅವರೆ,

  ಉಗೀರಿ ಉಗೀರಿ...

  ನೀವಿನ್ನೂ ಹಿಂದೆ ಇದ್ದೀರಿ... ಇನ್ನೂ ತುಂಬಾ ಇದೆ... :)

  ReplyDelete

Post a Comment

ಏನಾದ್ರೂ ಹೇಳ್ರಪಾ :-D

Previous Post Next Post