ಬೊಗಳೆ ರಗಳೆ

header ads

'ತೀರ್ಥ' ಯಾತ್ರೆ- ಭಾಗ 1/2

ಉಜ್ಜಯಿನಿ ಬಸ್ ನಿಲ್ದಾಣದಲ್ಲಿ ನನ್ನನ್ನು ಬಿಟ್ಟು ಎಲ್ಲೋ ನಾಪತ್ತೆಯಾದವರ ಬಗ್ಗೆ ತಲೆಕೆಡಿಸಿಕೊಳ್ಳದೆ ಮುಂದುವರಿದಾಗ ಈ ಮೃಚ್ಛಕಟಿಕದ ಸವಾರನೂ ಕೂಡ ಬಸ್ಸಿನಲ್ಲಿ ಹಾಕಿದ ಹಾಡಿನ ಮುಂದುವರಿದ ಭಾಗವನ್ನೇ ಹಾಕಿದ್ದ! " ಪರದೇಸೀ ಮೇರೇ ಯಾರಾ..., ವಾದಾ ನಿಭಾನಾ...ಮುಝೇ ಯಾದ್ ರಖ್‌ನಾ ಕಹೀಂ ಭೂಲ್ ನಾ ಜಾನಾ..." ಅಂತ ಹಾಡು ಮುಂದುವರಿದಾಗ ಯಾಕೋ ಮನಸ್ಸಿನಲ್ಲೆಲ್ಲೋ ತಳಮಳ ಮತ್ತು ಮೃಚ್ಛಕಟಿಕವನ್ನು ಮರೆಯಬಾರದೆಂಬ ಸಂಕಲ್ಪ.
 
ಮಹಾಕಾಲೇಶ್ವರ ಮಂದಿರದ ಬಳಿ ದಬಕ್ಕನೆ ಇಳಿಸಿದ ಚಾಲಕ, 'ಕ್ಯಾ ಸಾಬ್, ಆಪ್‌ಕೋ ದಾರೂ ವಗೈರಾ ಇಂತಜಾಮ್ ಕರೂಂ ಕ್ಯಾ' ಎಂದು ನಿರ್ಭಿಡೆಯಿಂದಲೇ ಕೇಳಿದ. ಇಳಿದು ಎತ್ತಕಡೆ ಹೋಗಬೇಕೆಂದು ತಿಳಿಯದೆ ಕಣ್ ಕಣ್ ಬಿಡುತ್ತಿದ್ದಾಗಲೇ, ಬಹುಶಃ ಆತನಿಗೆ ನಾನು ಪರದೇಸಿ ಅಂತ ಗೊತ್ತಾಗಿರ್ಬೇಕು, ಅದಕ್ಕಾಗಿ ಕೇಳಿರ್ಬೇಕು.
 
ಹೇಗಿದ್ದರೂ ಬಂದಿದ್ದು ತೀರ್ಥಯಾತ್ರೆಗೆ ಎಂದು ನೆನಪಾಗಿದ್ದು ಆಗಲೇ! ಮಹಾಕಾಲೇಶ್ವರನ ಮೊದಲು ಆತನಿಗೇ ಒಂದು ದೊಡ್ಡ ನಮಸ್ಕಾರ ಹಾಕಿ, ನಾನು ಬಂದಿದ್ದು ತೀರ್ಥ ಯಾತ್ರೆಗೆ ಹೌದಾದರೂ, ನಮ್ಮ ತೀರ್ಥ ಬೇರೆಯದು ಎಂದು ಸಮಜಾಯಿಷಿ ನೀಡಿದೆ.
ಇದು ಭಾರತದಲ್ಲಿರುವ 12 ಜ್ಯೋತಿರ್ಲಿಂಗಗಳಲ್ಲಿ ಒಂದು ಲಿಂಗ ಇರುವ ಕ್ಷೇತ್ರ. ಇಲ್ಲಿ ತೀರ್ಥ ಸೇವಿಸದಿದ್ದರೆ, ಸದ್ಗತಿ ಸಿಗಲಾರದು ಎಂದು ಯೋಚಿಸಿ ಜ್ಯೋತಿರ್ಲಿಂಗ ದರ್ಶನಾರ್ಥಿಯಾಗಿ ದೊಡ್ಡ ಸಾಲಿನಲ್ಲಿ ನಿಂತೆ.
 
ಆಗ ನೋಡಿ ಆರಂಭವಾಯಿತು.... ನಿರುದ್ಯೋಗ ಸಮಸ್ಯೆ ಎದುರಿಸುತ್ತಿರುವ ಭಾರತದಲ್ಲಿ ಹೇಗೂ ಬದುಕಬಹುದು, ಮನಸ್ಸಿದ್ದರೆ ಮಾರ್ಗ ಎಂಬ ವಿಷಯಕ್ಕೆ ಪುಷ್ಟಿ ದೊರೆಯುವ ಘಟನಾವಳಿಗಳು!
 
ಜ್ಯೋತಿರ್ಲಿಂಗ ದರ್ಶನವನ್ನು ಮಾಡಬೇಕಿದ್ದರೆ ಸುಮಾರು 2 ಗಂಟೆ ಉದ್ದರ ಕ್ಯೂನಲ್ಲಿ ನಿಲ್ಲಬೇಕಾಗಿತ್ತು. ಅಷ್ಟರಲ್ಲಿ ಅಲ್ಲಲ್ಲಿ ನುಸುಳುವ ಅಂಗಿ ಧರಿಸಿದ ಅರ್ಚಕರು (ಉತ್ತರ ಭಾರತದಲ್ಲಿ ಇದೇ ಸಂಪ್ರದಾಯ ಎಂಬಂತೆ ಕಾಣಿಸುತ್ತದೆ), "ಆಯಿಯೇ, ಆಪ್‌ಕೋ ಜಲ್ದೀ ದರ್ಶನ್ ಕರ್‌ವಾತೇ ಹೈಂ, ಕೇವಲ್ ಸೌ ರುಪಯಾ" ಎಂದು ಮೊದಲ ಎಚ್ಚರಿಕೆಯೇಟು ನೀಡಿದ.
 
ಹೇಗೆ ಅಷ್ಟು ಬೇಗ ನೂರು ರುಪಾಯಿ ಕೊಟ್ಟರೆ ದರ್ಶನ ಮಾಡಿಸುತ್ತೀಯಾ ಎಂದು ಕೇಳಿದರೆ, ಸರತಿ ಸಾಲಿನ ಒಂದು ಭಾಗದಲ್ಲಿರುವ ಗೇಟು ತೋರಿಸಿ, ಅಲ್ಲಿಂದ ನಿಮ್ಮನ್ನು ಕರೆದೊಯ್ಯುತ್ತೇನೆ ಎಂದುಬಿಟ್ಟ ಮಹಾಶಯ. ನೋಡೋಣ ಮುಂದೆ ಏನೆಲ್ಲಾ ಘಟಿಸುತ್ತದೆ ಎಂದು ಆತನಿಗೆ ಟಾಟಾ ಹೇಳಿ ಸಾಲಿನಲ್ಲಿ ನಿಂತರೂ, ಮತ್ತೊಬ್ಬ, ಮಗದೊಬ್ಬ, ಹೀಗೇ ಆಗಾಗ್ಗೆ ನಮ್ಮನ್ನು ಬಂದು ವಿಚಾರಿಸಿಕೊಳ್ಳುತ್ತಾ ಇರುವವರ ಸಂಖ್ಯೆ ಹೆಚ್ಚೇ ಆಗತೊಡಗಿತ್ತು.
 
ಮತ್ತೆ ಮುಂದುವರಿದಾಗ ಹೊಸದೊಂದು ವೇಷ ಪ್ರತ್ಯಕ್ಷವಾಯಿತು. ಕೈಯಲ್ಲಿ ತಾಮ್ರದ ಚೊಂಬು, ಕೊರಳೊಳು ರುದ್ರಾಕ್ಷಿ ಮಾಲೆಯೊಂದಿಗೆ, "ಅಭಿಷೇಕ್ ಕರ್ವಾನಾ ಹೈ?" ಎಂದು ಕೇಳಿದ. ಕೈಗೆ ಚೊಂಬು ಕೊಡಲು ಸಿದ್ಧನಾದ ಅವನನ್ನು ತಡೆದು ಮುಂದುವರಿದಾಗ, ಓಹ್.... ವೈಷ್ಣವ ಕ್ಷೇತ್ರ ತಿರುಪತಿಯಲ್ಲಿ ತಲೆ ಬೋಳಿಸುತ್ತಾರೆ, ಶೈವಕ್ಷೇತ್ರವಾದ ಇಲ್ಲಿ ಜೇಬು ಬೋಳಿಸುತ್ತಾರೆಯೇ ಎಂಬ ಕೆಟ್ಟ ಯೋಚನೆ ಮನದಲ್ಲಿ ಸುಳಿಯಿತು.
 
ತಲೆಯ ಮೇಲೆ ಕೈಯಾಡಿಸಿ, ತಲೆ ಬೋಳಾಗಿಲ್ಲ ಎಂಬುದನ್ನು ಖಚಿತಪಡಿಸಿಕೊಂಡು ಮುಂದುವರಿಯಲಾಯಿತು.
 
ಜ್ಯೋತಿರ್ಲಿಂಗ ಸಮೀಪಿಸುತ್ತಿರುವಂತೆಯೇ ಹರಹರ ಮಹಾದೇವ ಎಂಬ ಘೋಷಣೆಗಳು, ಭಕ್ತಾದಿಗಳ ಬಾಯಿಯಿಂದ ಹೊರಬರುತ್ತಿತ್ತು. ಯಾರೋ ಬೆಂಬತ್ತಿದವರಂತೆ, ಕಳವಳದ ಕೂಗಿನಂತಿತ್ತು ಈ ಘೋಷಣೆ. ದೇವರಿಗೆ ಮೆಲ್ಲ ಹೇಳಿದರೆ ಕೇಳಿಸಲಾರದು, ಹೇಗಿದ್ದರೂ ಎತ್ತರದ ಕೈಲಾಸ ಶಿಖರದಲ್ಲಿರೋದಲ್ಲಾ! ಅದಕ್ಕೇ ಇರಬೇಕು, ಆದರೆ ನಮ್ಮ ಕಿವಿ ತಮಟೆಯೇಕೆ ರಪ್ಪನೆ ಹರಿಯಬೇಕು? ಎಂಬ ಪ್ರಶ್ನೆಗೆ ಉತ್ತರ ನೀಡುವ ಸ್ಥಿತಿಯಲ್ಲಿ ಯಾರೂ ಇರಲಿಲ್ಲ.
 
ಮುಂದೆ ಘಟಿಸಿದ್ದು ಕರ್ನಾಟಕದ ಗೋಕರ್ಣವನ್ನು ನೆನಪಿಸುವ ಪ್ರಸಂಗ, ಸಾಕ್ಷಾತ್ ರೌದ್ರಾವತಾರ ದರ್ಶನ ಯೋಗ.! ನಿರುದ್ಯೋಗ ನಿವಾರಣಾ ಯೋಗ. (ಅಲ್ಲಿಗೆ ಮತ್ತೆ ಹೋಗಬೇಕಾಗಿರುವುದರಿಂದ ಅದನ್ನು ನಾಳೆ ಪ್ರಕಟಿಸಲಾಗುತ್ತದೆ)

ಕಾಮೆಂಟ್‌‌ ಪೋಸ್ಟ್‌ ಮಾಡಿ

10 ಕಾಮೆಂಟ್‌ಗಳು

 1. ha haa haa... hegiddaroo bandiruvudu theertha yaatrege annOdu thumba chennaagide :-)

  ಪ್ರತ್ಯುತ್ತರಅಳಿಸಿ
 2. ತೀರ್ಥಯಾತ್ರೆಗೆಂದೇ ಹೋದ ಮೇಲೆ ತೀರ್ಥ ಬೇಕೇ ಎಂದು ಕೇಳಿದ್ದರಲ್ಲಿ ತಪ್ಪೇನಿದೆ?

  ಅಸತ್ಯಾನ್ವೇಷಿಗಳು ಯಾಕೋ ಸತ್ಯಪ್ರಿಯರಾದಂತೆ ತೋರುತ್ತಿದೆಯಲ್ಲ?

  ಪ್ರತ್ಯುತ್ತರಅಳಿಸಿ
 3. ಅನ್ನಪೂರ್ಣ ಅವರೆ,

  ತೀರ್ಥದ ಬಗ್ಗೆ ಖುಷಿ ಪಡುವಂಥಹುದೇನಿದೆ ಎನ್ನೋದು ಗೊತ್ತಾಗ್ತಿಲ್ಲ. ;-)

  ಪ್ರತ್ಯುತ್ತರಅಳಿಸಿ
 4. ಪಬ್ಬಿಗರೆ,

  ನಿಮ್ಮ ಪಬ್ಬಿನಲ್ಲಿರೋದನ್ನೆಲ್ಲಾ ಖಾಲಿ ಮಾಡಲೆಂದೇ ನೀವು ಈ ರೀತಿ "ತಪ್ಪಿಲ್ಲ" ಅಂತ ಹೇಳುತ್ತಿದ್ದೀರಿ ಅಂತ ಗಮನಕ್ಕೆ ಬಂದಿದೆ.

  ಆಮೇಲೆ,
  ನೀವು ಮಾಡಿದ ಆರೋಪ ಸುಳ್ಳು ಎಂದು ಸಾಬೀತುಪಡಿಸಲು ನಿರ್ಧರಿಸಿದ್ದೇವೆ.

  ಪ್ರತ್ಯುತ್ತರಅಳಿಸಿ
 5. ನಿಮ್ಮ ಜೇಬು ಸರಿ ಇದೆಯೇ ಎಂದು ನೋಡಿಕೊಂಡಿರಾ? ಬಹುಶಃ ಆ ಊರಿನಲ್ಲಿ ಅರ್ಚಕರೇ ಜಾಸ್ತಿ ಇರಬೇಕು, ಕಳ್ಳರು ಕಡಿಮೆ ಇರಬೇಕು. ಎಷ್ಟೇ ಆಗಲಿ ದೈವ ಕ್ಷೇತ್ರ, ಮಹಿಮೆ ಇರುವಂತಹ ಊರು. ಕೋರ್ಗರ್ಣದಲ್ಲಿ ಅದೇನಾಗತ್ತೋ ಓದಲು ಕಾಯುತ್ತಿರುವೆ.

  ಪ್ರತ್ಯುತ್ತರಅಳಿಸಿ
 6. ಮಾವಿನರಸರೇ,
  ಈ ಊರಲ್ಲಿ ಕಳ್ಳರಿಲ್ಲ, ಅರ್ಚಕರೇ ಇರೋದು ಅಂತ ನೀವು ಅಲ್ಲಿಂದಲೇ ಪತ್ತೆ ಹಚ್ಚಿದ್ದೀರಾ!!!!

  ಪ್ರತ್ಯುತ್ತರಅಳಿಸಿ
 7. ತೀರ್ಥಾನ್ವೇಷಿಗಳೆ,

  ತೀರ್ಥ = c2h5OH :)

  ಒಂದು ಗುಟುಕು ಹಾಕಿದ್ರೆ, ವಪಸ್ ಬರುವ ದಾರಿಲಿ, ಹಳ್ಲಕೊಳ್ಲಗಳು ಗೊತ್ತಗ್ತ ಇರ್ಲಿಲ್ಲ, ಈಗ ಏನ್ ಪಾಡು ಅನುಭವಿಸಿದಿರೋ ಏನೊ?

  ಇಂತಿ
  ಪೆಡಂಭೂತ

  ಪ್ರತ್ಯುತ್ತರಅಳಿಸಿ
 8. ಪೆಂಡಭೂತೋತ್ತಮರೇ,

  ನಿಮ್ಮ ಅನುಭವದ ನುಡಿಗೆ ಮತ್ತು ಸಲಹೆಗೆ ಧನ್ಯವಾದ :)

  ವಾಪಸ್ ಬರುವಾಗ ಅದನ್ನು ಟ್ರೈ ಮಾಡಿ ನೋಡೋಣ. !!!

  ಪ್ರತ್ಯುತ್ತರಅಳಿಸಿ
 9. kshamisi asathya anveshi..... nimma ee maathu sada shivanige ade dhyana annOdanna jnapisutthe ;) (idu thamashege heliddu antha bareebekagilla thaane)

  naanu heliddu nimma barahada bagge, aa maathina bagge :)

  ಪ್ರತ್ಯುತ್ತರಅಳಿಸಿ
 10. ಅನ್ನಪೂರ್ಣ ಅವರೆ
  ನೀವು ನಮಗೆ ಒಗ್ಗದ ಸತ್ಯವನ್ನು ಬಹಿರಂಗಪಡಿಸಿದ್ದಕ್ಕಾಗಿ ಧನ್ಯವಾದ.

  ಆದರೆ ಕ್ಷಮಿಸಲಾಗುವುದಿಲ್ಲ. ಯಾಕೆಂದರೆ ಕ್ಷಮೆ ಸದ್ಯಕ್ಕೆ ಖಾಲಿಯಾಗಿದೆ, ಯಾರಾದರೂ ನಮಗೆ ಕೊಟ್ಟ ಬಳಿಕ ಅದನ್ನು ನಿಮ್ಮತ್ತ ಕಳುಹಿಸಲಾಗುವುದು.!!!!

  ಪ್ರತ್ಯುತ್ತರಅಳಿಸಿ

ಏನಾದ್ರೂ ಹೇಳ್ರಪಾ :-D