Subscribe Us

ಜಾಹೀರಾತು
header ads

Accident ಪರಿಹಾರ ನಿಧಿ ಕೋರಿ ತರುಣಿಯರ ಸಾಲು

(ಬೊಗಳೂರು ಸೆನ್‌ಸೆಕ್ಸ್ ಬ್ಯುರೋದಿಂದ)
ಬೊಗಳೂರು, ಅ.4- ಗುಜರಾತಿನಲ್ಲಿ ಅಧಿಕಾರಾರೂಢ ಮೋಡಿ ಸರಕಾರವು ವಿಚಿತ್ರ ಪರಿಸ್ಥಿತಿ ಎದುರಿಸುತ್ತಿದೆ. ದಸರಾ ಆಚರಣೆ ಸಂದರ್ಭ ಗರ್ಭಾ ನೃತ್ಯ ಪಾರ್ಟಿಗಳನ್ನು ಇಷ್ಟೊಂದು ಅದ್ದೂರಿಯಾಗಿ, ಲಂಗು ಲಗಾಮಿಲ್ಲದೆ, ಐಷಾರಾಮದಿಂದ ಆಚರಿಸುವುದು ಹೇಗೆ ಎಂಬ ಬಗ್ಗೆ ಬೊಗಳೆ ರಗಳೆ ಬ್ಯುರೋ ನಡೆಸಿದ ಅಸತ್ಯಾನ್ವೇಷಣೆಯ ವರದಿ ಸ್ಫೋಟಗೊಂಡಿದ್ದೇ ಇದಕ್ಕೆ ಕಾರಣ ಎಂಬುದು ತಿಳಿದುಬಂದಿದೆ.
 
ದಸರಾ ಆರಂಭಕ್ಕೆ ಮುನ್ನ ಅಲ್ಲಿನ ಮೆಡಿಕಲ್ ಶಾಪ್‌ಗಳಲ್ಲಿ ಶಾಪಕ್ಕೆ ತುತ್ತಾದವರಂತೆ ಹದಿ ಹರೆಯದ ಮಂದಿ ಸಾಲುಗಟ್ಟಿ ನಿಲ್ಲುತ್ತಿದ್ದರು. ಇದರಿಂದಾಗಿ ಔಷಧ ವಸ್ತುಗಳ ಸಂವೇದನೆ ಸೂಚ್ಯಂಕವು (ಸೆನ್‌ಸೆಕ್ಸ್ ಇಂಡೆಕ್ಸ್) ದಿಢೀರನೇ ಮೇಲಕ್ಕೆ ನೆಗೆದಿತ್ತು. ಔಷಧ ಅಂಗಡಿಗಳು ಪಿಲ್‌ಗಳ ಸಿಕ್ಕಾಪಟ್ಟೆ ವ್ಯಾಪಾರದಿಂದಾಗಿ ಸಾಕಷ್ಟು ಮಾಲು ಪೂರೈಸಲಾಗದೆ ಕೆಲವಂತೂ ಮುಚ್ಚಿರುವ ಅಂಶವು ನಮ್ಮ ಬದ್ಧವೈರಿ ನೆಟ್ಪತ್ರಿಕೆ CNN-IBN ಪ್ರಕಟ ಮಾಡಿದ್ದು, ಬೊಗಳೆ ಬ್ಯುರೋ ನೋಡಿದ ತಕ್ಷಣ ವರದಿಯನ್ನು ಹಿಂತೆಗೆದುಕೊಂಡಿತ್ತು.
 
ಈ ಸೆನ್‌ಸೆಕ್ಸ್ ಸಂವೇದನೆ ಸೂಚ್ಯಂಕವು ಬಿರುಸುಬಾಣದಂತೆ ಮೇಲೇರಿದ್ದರ ಹಿಂದೆ ಪಿಲ್ ತಯಾರಿಕಾ ಕಂಪನಿಗಳ ಕೈವಾಡವಿದೆ ಎಂಬ ಆರೋಪದ ಬಗ್ಗೆ ತನಿಖೆಗೆ ಪ್ರತಿಪಕ್ಷಗಳು ಒತ್ತಾಯಿಸುತ್ತಿವೆ. ಈ ಕಾರಣಕ್ಕೆ ಮೋಡಿ ಸರಕಾರ ಇಕ್ಕಟ್ಟಿನಲ್ಲಿ ಸಿಲುಕಿದೆ. ಹೊಸದಾಗಿ ಉತ್ಪಾದಿಸಿರುವ ಗರ್ಭ ನಿರೋಧಕ ಗುಳಿಗೆಯ ಪರಿಣಾಮ ಪರೀಕ್ಷಿಸುವ ನಿಟ್ಟಿನಲ್ಲಿ ಅವರು ಗುಜರಾತಿಗೇ ಲಗ್ಗೆ ಇಟ್ಟಿದ್ದಾರೆ ಎಂಬುದು ತನಿಖೆ ವೇಳೆ ಪತ್ತೆಯಾಗದ ಅಂಶ.
 
ಮತ್ತೊಂದು ಚಿಂತಾಜನಕ ಘಟನೆಯಲ್ಲಿ, ಗರ್ಭಾ ನೃತ್ಯದ ಸಂದರ್ಭದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಪಿಲ್ ಸಿಗದ ಕಾರಣ ತೀವ್ರ ತೊಂದರೆಗೀಡಾದ ಅವಿವಾಹಿತ ಗರ್ಭವತಿಯರು, accicent ವಿಮಾ ಪರಿಹಾರ ನೀಡಬೇಕೆಂದು ಮೋಡಿ ಸರಕಾರದ ಕಾಲೆಳೆಯಲಾರಂಭಿಸಿದ್ದಾರೆ. ನವರಾತ್ರಿ ಎಂಬ ಹಬ್ಬದ ಹೆಸರನ್ನು ಅಪಾರ್ಥ ಮಾಡಿಕೊಂಡು ಆಚರಣೆ ಮಾಡಿ accidentಗೆ ತುತ್ತಾದವರು ಅಲ್ಲಲ್ಲಿ ಧರಣಿ, ಪ್ರದರ್ಶನ ಇತ್ಯಾದಿ ನಿರತರಾಗಿದ್ದು, ರಾಜ್ಯದಲ್ಲಿ ನೈತಿಕ ಪೊಲೀಸ್ ವಿಭಾಗದ ಹೆಚ್ಚುವರಿ ತುಕಡಿಗಳನ್ನು ಕರೆಸಿಕೊಳ್ಳಲಾಗಿದೆ.
 
ಪಿಲ್‌ಗಳ ಅದ್ದೂರಿ ಮಾರಾಟದಿಂದಾಗಿಯೇ ಅದ್ದೂರಿಯಿಂದಲೇ ಗರ್ಭಾ ನೃತ್ಯ ಆಯೋಜಿಸಲು ಸಾಧ್ಯವಾಗಿತ್ತು ಎಂಬ ಅಂಶವನ್ನು ಮೋಡಿ ಸರಕಾರದ ಮನವಿ ಮೇರೆಗೆ ಬೊಗಳೆ ಬ್ಯುರೋ ನಡೆಸಿ ಸಲ್ಲಿಸಿದ ತನಿಖಾ ವರದಿಯಲ್ಲಿ bold  ಅಕ್ಷರಗಳಲ್ಲಿ ಉಲ್ಲೇಖಿಸಲಾಗಿದೆ.
 
ಇದೇ ಸಂದರ್ಭದಲ್ಲಿ, ತೀವ್ರ ತನಿಖೆ ನಡೆಸುತ್ತಾ ನಡೆಸುತ್ತಾ ಮುಂದುವರಿದಂತೆ, ಈ ಆಚರಣೆಗೆ ಗರ್ಭಾ ನೃತ್ಯ ಎಂದೇ ಹೆಸರಿರಿಸಿದ್ದೇಕೆ ಎಂಬ ಅಂಶವನ್ನೂ... ನಾವಲ್ಲ.... ನಾವಲ್ಲ... ನಮ್ಮ ಓದುಗರು ಪತ್ತೆ ಹಚ್ಚಿಬಿಟ್ಟಿದ್ದಾರೆ.
 
ಅಲ್ಲದೆ ಗರ್ಭಾ ನೃತ್ಯ ಕೂಟ ಇರುವಲ್ಲಿ ಏಡ್ಸ್ ಜಾಗೃತಿಯನ್ನೂ ಮೂಡಿಸುತ್ತಿರುವುದೇಕೆ ಎಂಬುದು ಯಾರಿಗೂ ಗೊತ್ತಾಗದ ಸಂಗತಿ.

ಕಾಮೆಂಟ್‌‌ ಪೋಸ್ಟ್‌ ಮಾಡಿ

2 ಕಾಮೆಂಟ್‌ಗಳು

 1. ಗರ್ಬಾ ನೃತ್ಯದ ಬಗ್ಗೆ ಕೇಳಿದ್ದೆ, ಅದನ್ನು ಆಡುವುದನ್ನು ನೋಡಿದ್ದೆ. ಇದ್ಯಾವುದಿದು ಗರ್ಭಾ ಆಟ. ಅನ್ವೇಷಿಗಳು ಯಾರಿಗೂ ತಿಳಿಯದಿರುವ ಹೊಸ ಹೊಸ ವಿಷಯಗಳನ್ನು ಹೆಕ್ಕಿ ಸಾರ್ವರ್ತ್ರಿಕ ಮಾಡುತ್ತಿರುವುದು ಬಹಳ ಸಂತೋಷದ (ಖೇದನೀಯ ಅಲ್ಲ) ವಿಷಯ. ಅಂದಹಾಗೆ ತುಂಟಾಟದ ಬ್ಯುರೋ ಕೂಡಾ ಪ್ರಾರಂಭಿಸಿದಂತಿದೆ. ನಿಮಗೆ ಈ ವರ್ಷದ ತುಂಟ ಪತ್ರಕರ್ತ ಎಂಬ ರಾಷ್ಟ್ರೀಯ ಪ್ರಶಸ್ತಿಯನ್ನು ನೀಡಲು ರಾಷ್ಟ್ರಾಧ್ಯಕ್ಷರಿಗೆ ಅಹವಾಲು ನೀಡುತ್ತಿರುವೆ.

  ತರುಣಿಯರು ಪರಿಹಾರ ಕೇಳುವಂತೆ ಮಾಡಿದವರಿಗೆ ಏನೂ ಕೊಡುವುದಿಲ್ಲವೇ?

  ಪ್ರತ್ಯುತ್ತರಅಳಿಸಿ
 2. ಶ್ರೀಗಳೆ,
  ನಾವು ಯಾವುದಕ್ಕೆ ಬೇಕಾದರೂ ಪ್ರಾಣ ಕೊಡುತ್ತೇವೆ.
  ಅದು ಅಲ್ಪ ಪ್ರಾಣವಾಗಿರಬಹುದು, ಮಹಾನ್ ಪ್ರಾಣವೂ ಆಗಿರಬಹುದು. ಹಾಗಾಗಿ ನೀವು ಕೇಳದಿರುವುದನ್ನು ನಾವು ಹೇಳಿದ್ದು.

  ನಿಮ್ಮ ಪ್ರಶಸ್ತಿಗೆ ನಮ್ಮ ತುಂಬು ಹೃದಯದ ಧಿಕ್ಕಾರವಿದೆ.

  ಕೊನೆಯಲ್ಲಿ ನೀವು ಕೇಳಿದ ಪ್ರಶ್ನೆಯಿಂದಾಗಿ ಹತ್ತು ಹಲವಾರು ಪ್ರಶ್ನೆಗಳು ಉದ್ಭವಿಸುವುದರಿಂದ ಅದಕ್ಕೆ ಉತ್ತರಿಸಲು ನಿರಾಕರಿಸಲಾಗುತ್ತಿದೆ. :)

  ಪ್ರತ್ಯುತ್ತರಅಳಿಸಿ

ಏನಾದ್ರೂ ಹೇಳ್ರಪಾ :-D