ಬೊಗಳೆ ರಗಳೆ

header ads

ಭಾರತ ಈಗ ನಂ.1 !!!

(ಬೊಗಳೂರು ಮೇರಾ ಭಾರತ್ ಮಹಾನ್ ಬ್ಯುರೋದಿಂದ )
ಬೊಗಳೂರು, ಅ.9- ಇದೋ ಬಂದಿದೆ... ಭಾರತೀಯರು ಎದೆಬಿರಿದುಕೊಂಡು ಸಂತಸಪಡಬೇಕಾದ ಶುಭ ಸುದ್ದಿ. ಎಲ್ಲರೂ ಕ್ಯಾಕರಿಸಿ ಸ್ವಾಗತಿಸಬೇಕಾದ ಸ್ಫೋಟಕ ಸಮಾಚಾರ. ಸರ್ವರೂ ಕಾತರದಿಂದ, ಕುತೂಹಲದಿಂದ ಕಾಯುತ್ತಿದ್ದ ಮತ್ತು ಎಲ್ಲರನ್ನೂ ಗಹಗಹಿಸಿ ನಗಬಲ್ಲಂತೆ ಮಾಡಬಲ್ಲ ಆ ರಸ ನಿಮಿಷಗಳು ಮರಳಿ ಬಂದಿವೆ... ಭಾರತವು ಜಾಗತಿಕವಾಗಿ ನಂ.1 ಸ್ಥಾನ ಪಡೆದಿರುವುದೇ ಈ ಉಲ್ಲಾಸದ ಕ್ಷಣಗಳಿಗೆ ಕಾರಣ.
 
ಐಟಿ, ಬಿಟಿ, ಶಿಕ್ಷಣ, ಪ್ರಗತಿ, ಅಭಿವೃದ್ಧಿ ಇತ್ಯಾದಿಗಳಲ್ಲಿ ನಂ.1 ಸ್ಥಾನ ಪಡೆಯಲು ಪ್ರಯತ್ನ ನಡೆಸುತ್ತಿರುವ ಭಾರತವು ಇದೀಗ ಭ್ರಷ್ಟಾಚಾರದಲ್ಲಿ ನಂ.1 ಸ್ಥಾನ ಪಡೆದಿರುವುದರಿಂದ ಬೊಗಳೆ ರಗಳೆ ಬ್ಯುರೋ ತೀವ್ರ ಸಂತಾಪ ವ್ಯಕ್ತಪಡಿಸಿದ್ದು, ಈ ಬಗ್ಗೆ ಯಾವುದೇ ಹೆಚ್ಚಿನ ತನಿಖೆ ಅಗತ್ಯವಿಲ್ಲ ಎಂಬುದನ್ನು ಕಂಡುಕೊಂಡಿದೆ.
 
ಇದಲ್ಲದೆ, ಈಗಾಗಲೇ ಐಟಿ ವಿಭಾಗದಲ್ಲಿ ಚೀನಾವನ್ನು ಹಿಂದಿಕ್ಕಲು ಹೊರಟಿರುವ ಭಾರತ, ಜನಸಂಖ್ಯೆಯಲ್ಲೂ ಅದನ್ನು ಹಿಂದಿಕ್ಕಲು ಸ್ವಾತಂತ್ರ್ಯ ದೊರೆತಂದಿನಿಂದಲೂ ತೀವ್ರವಾಗಿ ಹಗಲು ರಾತ್ರಿ ಶ್ರಮಿಸುತ್ತಿತ್ತು. ಈ ಪರಿಶ್ರಮಕ್ಕೆ ಸೂಕ್ತ ಪ್ರತಿಫಲ ಸದ್ಯದಲ್ಲೇ ದೊರೆಯಲಿದೆ ಎಂಬುದನ್ನು ಬೊಗಳೆ ರಗಳೆ ಬ್ಯುರೋ ಹುಟ್ಟುವ ಮೊದಲೇ ಯಾರೋ ಅನ್ವೇಷಿಸಿಯಾಗಿದೆ ಎಂಬುದನ್ನು ತಿಳಿಸಲು ವಿಷಾದಿಸುವುದಿಲ್ಲ.
 
ಈಗಾಗಲೇ ಭಾರತದಲ್ಲಿ ಗಿಂಬಳ ದರ ಜಾಸ್ತಿಯಾದ ಬಗ್ಗೆ ಎಚ್ಚರಿಕೆ ವರದಿ ಪ್ರಕಟಿಸಿದ್ದ ಬ್ಯುರೋಗೆ, ಭಾರಿ ಪ್ರಮಾಣದಲ್ಲಿ ಲಂಚ ರುಷುವತ್ತುಗಳು ಹರಿದು ಬಂದ ಪರಿಣಾಮವಾಗಿ ಭಾರತವು ಈ ಸಾಧನೆ ಮಾಡಲು ಅಮೋಘ ಕೊಡುಗೆ ದೊರಕಿದಂತಾಗಿದೆ ಎಂದು ಹೇಳಲಾಗುತ್ತಿದೆ.
 
ಬೊಗಳೆ ರಗಳೆಯಿಂದ ಕುಸ್ತಿ
ಇದೀಗ ನಂಬರ್ ಒನ್ ಸ್ಥಾನಕ್ಕೆ ಲಗ್ಗೆ ಹಾಕಿರುವ ಭಾರತದ ಪ್ರಯತ್ನದ ಹಿಂದೆ ಬೊಗಳೆ ರಗಳೆ ಬ್ಯುರೋದ ಕೊಡುಗೆ ಅತ್ಯಂತ ಮಹತ್ತರವಾದದ್ದು ಎಂದು ಎದೆತಟ್ಟಿಕೊಂಡು ಹೇಳಲಾಗುತ್ತಿದೆ. ಭಾರತದಲ್ಲಿ ಭ್ರಷ್ಟಾಚಾರವನ್ನು ಶಿಷ್ಟಾಚಾರವಾಗಿಸುವ ಯತ್ನಗಳು ನಡೆದಿರುವ ಬಗ್ಗೆ ಎಲ್ಲರಿಗೂ ಜ್ಞಾನೋದಯ ಮಾಡಿಸಲಾಗಿತ್ತು.
 
ಭಾರತವು ಹತ್ತು ಹಲವಾರು ಕ್ರಮಗಳನ್ನು ಕೈಗೊಂಡು, ಮಾಹಿತಿ ಹತ್ತಿಕ್ಕುವ ಕಾಯಿದೆ ಜಾರಿಗೂ ಪ್ರಯತ್ನಿಸಿತ್ತು. ಇದರ ಜತೆಗೆ ಭ್ರಷ್ಟಾಚಾರದ ಬೀಜಗಳನ್ನು ನೂರ್ಕಾಲ ಸಂರಕ್ಷಿಸುವ ತಂತ್ರಜ್ಞಾನಕ್ಕೂ ಪೇಟೆಂಟ್‌ಗೆ ಅರ್ಜಿ ಸಲ್ಲಿಸಲಾಗಿತ್ತು.
ಹೀಗೆ ಸಮಗ್ರವಾಗಿ, ಭಾರತವು ನಂ.1 ಆಗಿರುವುದರ ಹಿಂದೆ ಬೊ.ರ. ಬ್ಯುರೋದ ಕೈವಾಡವಿದೆ ಎಂದು ನಮಗೆ ಗೊತ್ತಿಲ್ಲದೆಯೇ ತಿಳಿದುಬಂದಿತ್ತು. ಅಷ್ಟಲ್ಲದೆ, ದೇಶವನ್ನು ಈ ಪರಿಯಾಗಿ ನಂ.1 ಸ್ಥಾನಕ್ಕೇರಿಸುವಲ್ಲಿ ಪ್ರಮುಖ ಪಾತ್ರವಹಿಸಿರುವ ಸಂಸದರ ವೇತನ ಹೆಚ್ಚಳ ಜುಜುಬಿ ಎಂದೆಲ್ಲಾ ಅರಚಾಡಿ ಬ್ಯುರೋವು ಜನರನ್ನು ಸಮರ್ಥವಾಗಿಯೇ ಎತ್ತಿಕಟ್ಟಿತ್ತು.
 
ಈ ಎಲ್ಲಾ ಕಾರಣಗಳಿಗೆ ಈ ವಿಷಯವನ್ನು ಸಿಕ್ಕ ಸಿಕ್ಕಲ್ಲೆಲ್ಲಾ ಪ್ರಚಾರ ಮಾಡಿಸಿ ಭಾರತದ ಅತ್ಯುನ್ನತ ಪ್ರಶಸ್ತಿಯಾದ ಭ್ರಷ್ಟ ರತ್ನ ಅಗೌರವ ಪಡೆಯಲು ತಲೆ ಕೆಳಗೆ-ಕಾಲು ಮೇಲೆ ಮಾಡಿ ಎಲ್ಲಾ ಕಡೆಯಿಂದಲೂ ಪ್ರಭಾವ ಬೀರಿಸಲಾಗುತ್ತಿದೆ. ಹೇಗಿದ್ದರೂ ನಂ.1 ದೇಶವಾಗಿರುವುದರಿಂದ ಇದು ಕಷ್ಟದ ಕೆಲಸವೇನಲ್ಲ ಎಂದು ತಿಳಿದುಕೊಂಡು ಸುಮ್ಮನಿರಲಾಗಿದೆ.
 
ಕೊನೆಗೊಂದು ನಿವೇದನೆ:
ಭ್ರಷ್ಟಾಚಾರದಲ್ಲಿ ಭಾರತ ನಂ. 1 ಎಂಬ ಸುದ್ದಿ ವಿಷಯ ಇದುವರೆಗೆ ಎಲ್ಲೂ ಪ್ರಕಟವಾಗಿಲ್ಲ ಅಷ್ಟೆ. ಆದರೆ ಜನಸಾಮಾನ್ಯರಿಗೆ ಈ ವಿಷಯವು ರಾಜಕಾರಣಿಗಳು ನಮ್ಮನ್ನು ಆಳಲು ಆರಂಭಿಸಿದಾಗಿನಿಂದಲೇ ಗೊತ್ತಿತ್ತು. ಆದರೂ ನಮ್ಮ ವಿರೋಧಿ ಪತ್ರಿಕೆಯು ಈ ಸುದ್ದಿ ಪ್ರಕಟಿಸಿ ಪ್ರಸಾರದ ಗಿಮಿಕ್ ಮಾಡಿರುವುದು ಗಮನಕ್ಕೆ ಬಂದಿದೆ. ಪ್ರತಿಸ್ಪರ್ಧಿ ಪತ್ರಿಕೆಗೆ ಸುದ್ದಿಯ ಕೊರತೆಯಿಂದಾಗಿ ಈ ಸುದ್ದಿಯನ್ನು ಪ್ರಕಟಿಸಿದೆ ಎಂದು ಶಂಕಿಸಲಾಗಿದ್ದು, ತನಿಖೆ ನಡೆಯುತ್ತಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

2 ಕಾಮೆಂಟ್‌ಗಳು

  1. ಭಾರತ ಎಂದಿಗೂ ಎಲ್ಲಿಯೂ ನಂ ೧. ಜನಸಂಖ್ಯೆಯಲ್ಲಿಯೇ ಆಗಲಿ, ಬಡತನದಲ್ಲಿಯೇ ಆಗಲಿ, ನಿರುದ್ಯೋಗದಲ್ಲಿಯೇ ಆಗಲಿ, ಹಿಂದಿನಿಂದ ಆಗಲಿ, ನಾವು ನಂ. ೧

    ಇಂದಿನ ಖಿಚಡಿ ಬಹಳ ರುಚಿಯಾಗಿದೆ. ಇನ್ನೊಂದು ಸಲ ಬಡಿಸುವಿರಾ?

    ಪ್ರತ್ಯುತ್ತರಅಳಿಸಿ
  2. ಹ್ವಾಯ್... ನಾವು ಕನ್ನಡಿಗರೇ?/???!!!

    ಖಚಡಿ ಸರಕಾರವೇ ನಮ್ಮನ್ನು ಆಳುತ್ತಿರುವಾಗ, ಮತ್ತು ಖಿಚಡಿ ಮಾಡುತ್ತಲೇ ಅವರು ನಮ್ ದೇಶಕ್ಕೆ ನಂ.1 ಪಟ್ಟ ಕೊಡಲು ಶ್ರಮಿಸುತ್ತಿರುವಾಗ ನಮ್ಮ ಖಿಚಡಿಯ ರುಚಿ ಏನು ಮಹಾ...!!!

    ಪ್ರತ್ಯುತ್ತರಅಳಿಸಿ

ಏನಾದ್ರೂ ಹೇಳ್ರಪಾ :-D