(ಬೊಗಳೂರು ಭವತಿ ಭಿಕ್ಷಾಂ ದೇಹಿ ಬ್ಯುರೋದಿಂದ)
ಬೊಗಳೂರು, ಸೆ.14- ಫೈನ್ ಆಗಿ ಭಿಕ್ಷೆ ಬೇಡುವ ವೃತ್ತಿಯಲ್ಲಿ ಮುಂದುವರಿಯದ ಮಹಿಳೆಗೆ ಫೈನ್ ವಿಧಿಸಲಾಗಿದೆ ಎಂಬ ಸುದ್ದಿ ಪ್ರಕಟವಾದ ಹಿನ್ನೆಲೆಯಲ್ಲಿ ಇದರ ಹಿಂದಿನ ಅಸತ್ಯ ಅನ್ವೇಷಣೆಗಾಗಿ ಹೊರಟಾಗ ಈ (ಪರಾ)ಕ್ರಮದ ಸರಕಾರದ ಕೈವಾಡವಿರುವುದು ಖಚಿತವಾಗಿದೆ.
 
ಈ ಮಹಿಳೆ ಕಳೆದ ವರ್ಷದವರೆಗೂ ವಂಶಪಾರಂಪರ್ಯವಾಗಿ ವೃತ್ತಿ ಮುಂದುವರಿಸುತ್ತಾ ಭಿಕ್ಷೆ ಬೇಡುತ್ತಿದ್ದು, ಆದಾಯ ತೆರಿಗೆ ಕಟ್ಟದಿರುವ ಕಾರಣಕ್ಕಾಗಿಯೇ ಈ ರೀತಿ ದಂಡ ಹೇರಲಾಗಿದೆ ಎಂದು ತಿಳಿದುಬಂದಿದೆ.
 
ಅನಾದಿ ಕಾಲದಿಂದಲೂ ಭಿಕ್ಷುಕರ ಬೆನ್ನೆಲುಬು ಬಾಗಿದ್ದರೂ ಅವರೇ ನಮ್ಮ ದೇಶದ ಬೆನ್ನೆಲುಬಾಗಿದ್ದರು. ಇಷ್ಟು ಮಾತ್ರವಲ್ಲ ದೇಶದ ವಾಣಿಜ್ಯ ರಾಜಧಾನಿ ಎನಿಸಿಕೊಂಡ, ಶ್ರೀನಿವಾಸರ ಗೂಡು ಇರುವ ಮುಂಬಯಿಯಲ್ಲೂ ಶಬ್ದ ಮಾಲಿನ್ಯ ಹೆಚ್ಚಳಕ್ಕೆ ಭಿಕ್ಷುಕರ ಸಂಪಾದನೆಯ ಠಣ್ ಠಣ್ ಶಬ್ದಗಳೇ ಕಾರಣ ಎಂದು ಬೊಗಳೆ ರಗಳೆ ಪತ್ರಿಕೆ ತಡವಾಗಿ ಎಚ್ಚೆತ್ತುಕೊಂಡು Ex-In-Clusive ವರದಿಯಾಗಿ ಪ್ರಕಟಿಸಿರುವುದನ್ನು ಇಲ್ಲಿ ಜ್ಞಾಪಿಸಿಕೊಳ್ಳಬಹುದು.
 
ಅಭಿವೃದ್ಧಿ ಪರೀಕ್ಷಾ ಟೂಲ್ !
 
ದೇಶದಲ್ಲಿ ಮಾಹಿತಿ ತಂತ್ರಜ್ಞಾನ ಹೆಚ್ಚಿದಂತೆ ಭಿಕ್ಷಾಟನಾ ತಂತ್ರಜ್ಞಾನವೂ ಹೆಚ್ಚಿದ್ದು, ಇದರಿಂದ ದೇಶ ಅಭಿವೃದ್ಧಿ ಪಥದಲ್ಲಿ ಸಾಗುತ್ತಿದೆ ಎಂಬುದನ್ನು ಕಣ್ಣಾರೆ ಕಾಣಬೇಕೇ? ಹೀಗೊಂದು ಕೆಲಸ ಮಾಡಿ ಪರೀಕ್ಷಿಸಿಕೊಳ್ಳಬಹುದಾಗಿದೆ ಎಂಬುದನ್ನು ನಮ್ಮ ಬ್ಯುರೋ ತತ್ತರಿಸುತ್ತಾ ಬಿತ್ತರಿಸುತ್ತಿದೆ.
 
ದಾರಿಯಲ್ಲಿ ಹೋಗುತ್ತಿದ್ದಾಗ ಅಮ್ಮಾ... ಅಯ್ಯಾ... ಅನ್ನುವ ಭಿಕ್ಷುಕರ ತಟ್ಟೆಗೆ ಠಣ್ ಅಂತ ಒಂದು ರೂಪಾಯಿ ನಾಣ್ಯ ಎಸೆದುಬಿಡಿ ನೋಡೋಣ! ಆಗಲೇ ಅವರ ಬಾಯಿಂದ ಸಹಸ್ರನಾಮಾರ್ಚನೆ ಬರುತ್ತದೆ... ನಾಣ್ಯಗಳನ್ನೆಲ್ಲಾ ನಮ್ಮ ಡಿಕ್ಷನರಿಯಿಂದಲೇ ತೊಡೆದು ಹಾಕಿದ್ದೇವೆ, ನೋಟು ಇಲ್ಲವೇ ಎಂದು ಅವರೇ ಬಾಯಿಬಿಟ್ಟು ಪ್ರಶ್ನಿಸಿದರೆ, ದೇಶ ಮತ್ತು ಆ ಪ್ರದೇಶ ಅಭಿವೃದ್ಧಿ ಹೊಂದಿದೆ ಎಂದರ್ಥ. ಸಿಕ್ಕಿದ್ದು ದಕ್ಕಿತು ಅಂತ ಸುಮ್ಮನಾದರೆ ಆ ಪ್ರದೇಶವಿನ್ನೂ ಹಿಂದುಳಿದಿದೆ ಎಂದರ್ಥ.
 
ಆಧುನಿಕ ಭಿಕ್ಷುಕರು ಮತ್ತು ಭಕ್ಷಕರು
 
ದಾರಿಹೋಕರನ್ನು ಕಾಡಿಬೇಡುವುದು ಈಗಿನ ಫ್ಯಾಶನ್ ಅಲ್ಲ. ಈಗೇನಿದ್ದರೂ ಕೈಯಲ್ಲೊಂದು ಮೊಬೈಲ್ ಫೋನ್ ಹಿಡಿದುಕೊಂಡು, ನನಗೆ ನೀಡಲಾಗುವ ಭಿಕ್ಷೆಯನ್ನು ನನ್ನ ಬ್ಯಾಂಕ್‌ನ ಕ್ರೆಡಿಟ್ ಕಾರ್ಡ್ ಅಕೌಂಟಿಗೆ ಜಮಾ ಮಾಡಿ ಎಂದು ಅವರೇ ಸವಿನಯವಾಗಿ ಪ್ರಾರ್ಥಿಸುತ್ತಾರೆ. ಅವರು ಕ್ರೆಡಿಟ್ (ಸಾಲ) ಮಾಡಿಯೇ ಈ ಕ್ರೆಡಿಟ್ ಪಡೆದುಕೊಂಡಿದ್ದಾರೆ.
 
ಇದರೊಂದಿಗೆ, ಬರೇ ಭಿಕ್ಷುಕರು ಎಂದು ನಮ್ಮ ಬಗ್ಗೆ ಅಗೌರವ ತೋರಿಸುವುದೇಕೆ ಎಂದು ಪ್ರಶ್ನಿಸುವ ಭಿಕ್ಷುಕ ಸಮುದಾಯವು, ವಿಶ್ವ ಬ್ಯಾಂಕಿನಿಂದ ಭಿಕ್ಷೆ ಬೇಡಿ ತಂದ ಹಣವನ್ನು ನಮಗೆ ಪ್ರಾತಃಸ್ಮರಣೀಯರೂ, ಮಾದರಿ ಪುರುಷರೂ ಆಗಿರುವ ನಮ್ಮನ್ನಾಳುವವರು ಭಕ್ಷಣೆ ಮಾಡುವುದಿಲ್ಲವೇ? ಎಂದು ಪ್ರಶ್ನಿಸಿದ್ದಾರೆ.
 
ಅವರೆಲ್ಲಾ ಯಾರಿಗೂ ತಿಳಿಯದಂತೆ ಮತ್ತು ತಿಳಿದರೂ ಏನೂ ಆಗದವರಂತೆ ಭಕ್ಷಣೆ ಮಾಡುತ್ತಾರೆ, ಆದರೆ ನಾವು ಭಕ್ಷಣೆ ಮಾಡುವುದು ಎಲ್ಲರಿಗೂ ಗೊತ್ತಾಗುವಂತಿರುತ್ತದೆಯಾದುದರಿಂದ ನಮಗೆ ತೆರಿಗೆ ರಿಯಾಯಿತಿ ನೀಡಬೇಕು ಎಂದು ಅವರ ಒಕ್ಕೊರಲ ಆಗ್ರಹ.

4 Comments

ಏನಾದ್ರೂ ಹೇಳ್ರಪಾ :-D

 1. ಭಿಕ್ಷಾಟನೆ ಇಷ್ಟೊಂದು ಮುಂದುವರೆದ ಉದ್ಯಮವಾಗಿದೆ ಎಂದು ನನಗೆ ತಿಳಿದಿರಲೇ ಇಲ್ಲ. ಈ ಉದ್ಯಮವನ್ನು ಪ್ರಾರಂಭಿಸಲು ಪರವಾನಗಿ ಪಡೆಯಬೇಕೇ? ಯಾವ ಇಲಾಖೆಯ ಯಾರಿಗೆ ಭಿಕ್ಷೆ ನೀಡಿದರೆ ಈ ವೃತ್ತಿ ಪ್ರಾರಂಭಿಸಬಹುದು. ಸದ್ಯದಲ್ಲಿಯೇ ಅರ್ಜಿ ಸಲ್ಲಿಸೋಣ ಎಂದು ಆಸೆಯಾಗುತ್ತಿದೆ. ಮೈ ಕೈ ನೋವಿಲ್ಲದೆಯೇ ಹೈಟೆಕ್ ವೃತ್ತಿ ಮಾಡೋದ್ರಲ್ಲಿ ಸಿಗೋ ಮಜಾನೇ ಬೇರೆ.

  ReplyDelete
 2. "ಫೈನ್ ಆಗಿ ಭಿಕ್ಷೆ ಬೇಡುವ ವೃತ್ತಿಯಲ್ಲಿ ಮುಂದುವರಿಯದ ಮಹಿಳೆಗೆ ಫೈನ್ ವಿಧಿಸಲಾಗಿದೆ"

  interesting :)

  ReplyDelete
 3. ಮಾವಿನರಸರೆ,

  ನಿಮ್ಮ ಮೈಕೈ ನೋವಿಲ್ಲದಿದ್ದರೂ ಬಾಯಿ ಮಾತ್ರ ಜೋರಾಗಿರಬೇಕಾಗುತ್ತೆ.... ಅರಚಬೇಕಲ್ವಾ...

  ಆಮೇಲೆ,
  ಸದ್ಯಕ್ಕೆ ನಮಗೇ ಅರ್ಜಿ ಸಲ್ಲಿಸಿಬಿಡಿ... ಮತ್ತೆ, ನಿಮ್ಮ ಸಂಪಾದನೆ ನೋಡಿಕೊಂಡು, ಅದರಲ್ಲಿ ನಮ್ಮ ಕಮಿಶನ್ ನೋಡಿಕೊಂಡು... slow-motion ನೀಡಲಾಗುತ್ತದೆ.

  ReplyDelete
 4. ಮನಸ್ವಿನಿ ಅವರೆ,

  interesting ಅಂತ ಹೇಳಿ ಎಚ್ಚರಿಕೆ ನೀಡಿದ್ದೀರಿ...
  ಇನ್ನು ಮುಂದೆ ಹಾಗಾಗದಂತೆ ನೋಡಿಕೊಳ್ಳುತ್ತೇವೆ.

  ReplyDelete

Post a Comment

ಏನಾದ್ರೂ ಹೇಳ್ರಪಾ :-D

Previous Post Next Post