(ಬೊಗಳೂರು ಮೀನುಗಾರಿಕಾ ಬ್ಯುರೋದಿಂದ)
ಬೊಗಳೂರು, ಸೆ.8- ಇದೀಗ ಕರ್ನಾಟಕದಲ್ಲಿ ಮಳೆಗಾಲ ಮುಗಿಯುತ್ತಾ ಬರುತ್ತಿರುವಂತೆಯೇ ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಬೃಹತ್ ಪ್ರಮಾಣದ ಬೀಸು ಬಲೆಗಳನ್ನು ಹಿಡಿದುಕೊಂಡು ಮೀನು ಹಿಡಿಯಲು ಹೊರಟಿದ್ದಾರೆ ಎಂಬ ಅಂಶ ಬೊಗಳೆ ರಗಳೆ ಬ್ಯುರೋಗೆ ತಿಳಿದುಬಂದ ತಕ್ಷಣ ಕಿವಿಗೆ ಗಾಳಿ ಹೊಕ್ಕಂತಾಯಿತು.
 
ತಕ್ಷಣವೇ ಬ್ಯುರೋ ಕೂಡ ಗಾಳ ಹಿಡಿದುಕೊಂಡು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹೇಳಿದ ಸಾಗರದತ್ತ ತೆರಳಿದಾಗ ಕಂಡ ದೃಶ್ಯ ಎಲ್ಲರ ಮನ ಕಲಕುವಂತಿತ್ತು. ಹಲವಾರು ಪುಡಾರಿಗಳು ಆ ಸಾಗರದಲ್ಲಿ ಬಲೆ ಹರಡಲು ಹೆಣಗಾಡುತ್ತಿದ್ದರು. ಯಾಕೆಂದರೆ ಈ ಸಾಗರದಲ್ಲಿ ತಿಮಿಂಗಿಲಗಳಿವೆ ಎಂದು ದೇವೇಗೌಡರೇ ಹೇಳಿದ್ದರಿಂದ ಅವರು ದೊಡ್ಡ ದೊಡ್ಡ ಕಬ್ಬಿಣದ ಬಲೆಗಳನ್ನೇ ಹಿಡಿದುಕೊಂಡು ಬಂದಿದ್ದರು.
 
ಮತ್ತೆ ಕೆಲವರು ತಮ್ಮ ಕೈಯಲ್ಲಿದ್ದ ಪುಟ್ಟ ಪುಟ್ಟ ಗಾಳದಿಂದ ಪುಟ್ಟ ಪುಟ್ಟ ತಿಮಿಂಗಿಲಗಳನ್ನು ಹಿಡಿಯಲು ಯತ್ನಿಸುತ್ತಿದ್ದುದು ಕಂಡುಬಂತು.
 
ನಮ್ಮ ಕೊಳದಲ್ಲಿ ಹೆಚ್ಚೆಂದರೆ ಕಪ್ಪೆ, ಆಮೆ ಇರಬಹುದು. ಆದರೆ ಕಾಂಗ್ರೆಸ್ ಸಾಗರದಲ್ಲಿ ತಿಮಿಂಗಿಲಗಳೇ ಇವೆ ಎಂಬ ಅವರ ಹೇಳಿಕೆಯಿಂದ ಪ್ರೇರಣೆಗೊಂಡ ಜನತಾ ವಿದಳನೆಯ ಸದಸ್ಯರು ಕೂಡ ಅಲ್ಲಿ ದೊಡ್ಡ ಹಡಗನ್ನೇ ತಂದು ನಿಲ್ಲಿಸಿದ್ದು ಕಂಡು ಬಂತು.
ಅವರನ್ನು ಈ ಬಗ್ಗೆ ವಿಚಾರಿಸಲಾಗಿ, ಇದು ಇಟಲಿಯಿಂದ ಬಂದ ದೊಡ್ಡ ತಿಮಿಂಗಿಲವನ್ನು ಸೆರೆಹಿಡಿಯುವುದಕ್ಕಾಗಿ ತಯಾರಿ ಎಂಬ ಉತ್ತರ ಬಂತು.
 
ಆದರೆ ದೊಡ್ಡ ತಿಮಿಂಗಿಲದ ಮರಿಯೊಂದು ರಾಜ್ಯವಾಳುತ್ತಿದೆಯಲ್ಲ ಎಂದು ಕೇಳಿದಾಗ ಬಳಬಳನೆ ಇರಿಸುಮುರಿಸುಗೊಳಗಾದಂತೆ ಕಂಡುಬಂದ ವಿದಳ ಸದಸ್ಯರು, ಗೋಣಲ್ಲಾಡಿಸುತ್ತಾ ಮೆಲ್ಲಗೆ ಜಾರಿಕೊಂಡರು.
 
ಅಲ್ಲಿ ಉಳಿದವರ ಬಳಿ ಮತ್ತೊಂದು ಪ್ರಶ್ನೆ ಕೇಳಲಾಯಿತು. ರಾಜ್ಯವಾಳುವ ಕುಮಾರರು ಅಲ್ಲಲ್ಲಿ ಹೋಗಿ ಜನಸಾಮಾನ್ಯರ ಮನೆಯಲ್ಲಿ ಗಡದ್ದಾಗಿ ನಿದ್ದೆ ಹೊಡೆಯುವುದೇಕೆ?
 
ಈ ಪ್ರಶ್ನೆಗೆ ಧಢಾರನೆ ಬಾಗಿಲು ಹಾಕಿದಂತೆ ಉತ್ತರ ಬಂತು: "ಅಲ್ಲಾ ಸ್ವಾಮಿ... ಮಣ್ಣಿನ ಮಗ ಎಲ್ಲಾ ಸಭೆ ಸಮಾರಂಭಗಳಲ್ಲಿ ನಿದ್ದೆ ಮಾಡುತ್ತಿದ್ದುದನ್ನು ಪ್ರಶ್ನಿಸಿದವರು ನೀವೆ... ಈಗ ಮಣ್ಣಿನ ಮೊಮ್ಮಗ ಯಾವುದೇ ಉಸಾಬರಿ ಬೇಡ ಎಂದು ಮನೆಯೊಳಗೆ ನಿದ್ದೆ ಮಾಡಿದ್ರೂ ನೀವು ಪ್ರಶ್ನಿಸ್ತೀರಿ... ಎಂಥಾ ಪತ್ರಿಕೆಯಯ್ಯಾ ನಿಮ್ದು?"
 
ಅಲ್ಲಿಗೆ... ನಿದ್ದೆ ಬಂದಂತಾದ ನಮ್ಮ ಬ್ಯುರೋ ಸಿಬ್ಬಂದಿ ಒಂದೇ ಏಟಿಗೆ ಆzzzzzzzzzಕಳಿಸಿ ಬ್ಯುರೋಗೆ ವಾಪಸಾಯಿತು.

4 Comments

ಏನಾದ್ರೂ ಹೇಳ್ರಪಾ :-D

 1. ಈ ಮೊದಲು ಮೀನು ಹಿಡಿಯಲು ಎಲ್ಲರಿಗಿಂತ ಮೊದಲು ಬರುತ್ತಿದ್ದ ಮಧ್ವರಾಮ ಮನೋರಾಜರು ಈಗೆಲ್ಲಿದ್ದಾರೆ. ಅವರಿದ್ದರೆ ಈ ದೇವಕೃಪರು ಮೀನು ಆಯ್ದುಕೊಂಡು ಬರಲು ಹೋಗುತ್ತಿದ್ದರೇನೋ?

  ಓಹ್ ಮಣ್ಣಿನ ಮೊಮ್ಮಗ ಮಣ್ಣಿನ ಗೋಡೆಯ ಮನೆಯಲ್ಲಿ ಮಲಗಲು ಹೋಗಿದ್ರೇ? ಮಣ್ಣಿನ ಗೋಡೆ, ಮಣ್ಣಿನ ಮನೆ ಆರೋಗ್ಯಕ್ಕೆ ಒಳ್ಳೆಯದಂತೆ. ಕೆಲವೆಡೆಗಳಲ್ಲಿ ಕೊಚ್ಚೆ ಮಣ್ಣಿನಲ್ಲಿ ಒದ್ದಾಡಿ, ಬಿಸಿಲಿಗೆ ಮೈ ಒಣಗಿಸಿಕೊಂಡ ತರುವಾಯ ಮೈ ಫಳ ಫಳ ಹೊಳೆಯುವುದಂತೆ. ಅದೇನೋ ತೆಪರಪಿ ಅಂತಾರೆ.

  ನಿಮ್ಮ ಬ್ಯುರೋ ವರದಿಗಾರರು ನಿದ್ರೆ ಬಂದರೆ ಕಛೇರಿಗೆ ಬರ್ತಾರೆಯೇ? ನಿದ್ರಾರಹಿತರಿಗೆ ನಿದ್ರೆ ತರಿಸುವ ತಾಣವೆಂದಾಯಿತು. ನಿದ್ರೆ ಬರದವರು ಬೊ-ರ ಬ್ಯುರೋವಿನಲ್ಲಿ ಹಾಸಿಗೆ ಪುಸ್ತಕ ಮಾಡುವ ಬಗ್ಗೆ ಜಾಹೀರಾತು ಕೊಡಲೇ?

  ReplyDelete
 2. ಮಾವಿನ ಸರಸರೆ

  ಮಣ್ಣು ಮಣ್ಣೆಂದೇತಕೆ ಬೀಳುಗಳೆವಿರಿ ನೀವು
  ನೀವು ಮೆಟ್ಟಿಹ ನೆಲವೇ ಮಣ್ಣಲ್ಲವೇ?
  ಪುಡಾರಿಗಳು ನಮ್ಮನ್ನು ಮೆಟ್ಟೋದೂ ಮಣ್ಣಿನ ಮೇಲಲ್ಲವೇ?

  ನಮ್ಮಲ್ಲಿ ನಿದ್ದೆ ಬಂದ್ರೆ ಮಾತ್ರವೇ ಕಚೇರಿಗೆ ಬರೋದು ಎಂಬುದು ಅಪ್ಪಿ ತಪ್ಪಿ ಪ್ರಕಟವಾದ ವಿಷಯ ಮಾರಾಯ್ರೇ... ನೀವು ಅದನ್ನು ದೊಡ್ಡದು ಮಾಡ್ಲಿಕ್ಕೆ ಹೋಗ್ಬೇಡಿ!

  ReplyDelete
 3. ಕನ್ನಡದ ನೆಲ್ಸನ್ ಮಂಡೇಲ ಯಾರು ಗೊತ್ತೆ? ಅವರೇ ದೇವೇಗೌಡ. ಯಾಕೆ? ಅವರು ಮಣ್ಣಿನ ಮಗ ತಾನೆ? ಅಂದರೆ ನೆಲ ಸನ್. ಅವರಿಗೆ ಮಂಡೆ ಇಲ್ಲ. ಸಂಧಿ ಮಾಡಿದರೆ ನೆಲ್ಸನ್ ಮಂಡೇಲ!

  -ಪಬ್

  ReplyDelete
 4. ಅಬ್ಬಾ ಪಬ್ಬಿಗರೆ,

  ದೇವೇಗೌಡರನ್ನು ನೆಲ್ಸನ್ ಮಂಡೇಲಾ ಮಾಡಿದ ನಿಮ್ಮ ಮಂಡೆ ರಕ್ಷಿಸಿಕೊಳ್ಳಿ...


  ಕೊನೆಗೂ ನಮ್ ಜತೆ ಸೇರ್ಕೊಂಡ್ರಲ್ಲಾ... ಧನ್ಯವಾದ
  ಪಬ್ಬಿಂದ ಬಂದ ಒಳ್ಳೇ ಎಂಡ್ಕುಡ್ಕ!

  ReplyDelete

Post a Comment

ಏನಾದ್ರೂ ಹೇಳ್ರಪಾ :-D

Previous Post Next Post