(ಬೊಗಳೂರು ಠಳಾಯಿಸುವ ಬ್ಯುರೋದಿಂದ)
ಬೊಗಳೂರು, ಜೂ.9- ಪತ್ರಿಕೆಯನ್ನು ಸುಟ್ಟು ಹಾಕಿದ ಕಾರಣ ದೇಶ ಒಂದು ದಿನದ ಮಟ್ಟಿಗೆ ಪರದೇಸಿಯಾಗಲು ಹೊರಟ ಅಸತ್ಯಾನ್ವೇಷಿಗೆ ಲಾರ್ಜ್ ಬುಷ್ ಕಾರ್ಯಕ್ರಮಕ್ಕೆ ತುರ್ತು ಆಹ್ವಾನ ದೊರೆಯಿತು.

ಅದು ಅಮೆರಿಕದ ಅಧ್ಯಕ್ಷರ ಶಾಲಾ ಸಂದರ್ಶನ ಕಾರ್ಯಕ್ರಮವಾಗಿದ್ದ ಹಿನ್ನೆಲೆಯಲ್ಲಿ ಕಾರ್ಯಮರೆತ ಪತ್ರಕರ್ತ ಅಸತ್ಯಾನ್ವೇಷಿಯ ಭೇಟಿಗೆ ಮಹತ್ವ ದೊರೆತಿತ್ತು. ಇದಲ್ಲದೆ, ಅಲ್ ಖೈದಾದ ಪ್ರಮುಖ ಉಗ್ರಗಾಮಿ ಅಲ್ ಜರ್ಖಾವಿ ಕೂಡ ಇರಾಕಿನಲ್ಲಿ ಅಮೆರಿಕದ ದಾಳಿಗೆ ಸಿಲುಕಿ ಹತನಾದ ಸುದ್ದಿಯೂ ಬಂದಿತ್ತು.

ಇರಾನ್ ಮೇಲೆ, ಇರಾಕ್ ಮೇಲೆ ದಾಳಿ, ಅಫಘಾನಿಸ್ತಾನದ ಮೇಲೆ ಯುದ್ಧದ ಕುರಿತಾಗಿ, ಅದರ ಸಂಚಿನ ಕುರಿತಾಗಿ ಅದು-ಇದು ಮಾತನಾಡಿದ ಲಾರ್ಜ್ ಬುಷ್, ಪ್ರಶ್ನೆ ಕೇಳುವಂತೆ ಮಕ್ಕಳಿಗೆ ಸೂಚಿಸಿದರು.

ಅಸತ್ಯಾನ್ವೇಷಿ ಕೈಯೆತ್ತಿದಾಗ, ಲಾರ್ಜ್ ಬುಷ್ ಗೊತ್ತಿದ್ದರೂ ಗೊತ್ತಿಲ್ಲದವರಂತೆ "ನಿಮ್ಮ ಹೆಸರೇನು?" ಕೇಳಿದರು.
"ಅಸತ್ಯಾನ್ವೇಷಿ"
"ಹೂಂ. ಏನಾಗಬೇಕಿತ್ತು?"
"ನನಗೆ ಕೇಳಲು ಮೂರು ಪ್ರಶ್ನೆಗಳಿವೆ"
"ಕೇಳಿ"

ಮೊದಲನೆಯದು: ವಿಶ್ವಸಂಸ್ಥೆಯ ಬೆಂಬಲವಿಲ್ಲದಿದ್ದಾಗ್ಯೂ ಅಮೆರಿಕವು ಇರಾಕ್ ಮೇಲೆ ಆಕ್ರಮಣ ಮಾಡಿದ್ದೇಕೆ?
ಎರಡನೆಯದು ಅಲ್ ಗೋರೆಗೆ ಅಧಿಕ ಮತಗಳು ಸಿಕ್ಕಿದ್ದರೂ ನೀವೇಕೆ ಅಧ್ಯಕ್ಷರಾದಿರಿ?
ಕೊನೆಯದು ಒಸಾಮಾ ಬಿನ್ ಲಾಡೆನ್ನಿಗೇನಾಯಿತು?

ಅಷ್ಟು ಹೊತ್ತಿಗೆ ಶಾಲೆಯ ವಿರಾಮದ ಗಂಟೆ ಬಾರಿಸಿತು. recess ಅವಧಿ ಮುಗಿದ ಬಳಿಕ ಮುಂದುವರಿಸೋಣ ಅಂತ ಲಾರ್ಜ್ ಬುಷ್ ಟಾಟಾ ಹೇಳಿದರು.

ವಿರಾಮದ ಅವಧಿಯ ಬಳಿಕ ನಡೆದ ಪ್ರಸಂಗವನ್ನು ನಮ್ಮ ಬೊಗಳೆ ಬ್ಯುರೋದ ವಿಶಿಷ್ಟ ಕ್ಯಾಮರಾ ಮಾತ್ರ ದಾಖಲಿಸಿಕೊಂಡಿತು. ಅದಕ್ಕೆ ಕಾರಣ ಈ ವರದಿಯ ಕೊನೆಯಲ್ಲಿ ತಿಳಿಯುತ್ತದೆ.

Recess ಬಳಿಕ ಮತ್ತೆ ಪ್ರಶ್ನೋತ್ತರ ಕಾರ್ಯಕ್ರಮ ಮುಂದುವರಿಯಿತು. ಲಾರ್ಜ್ ಹೇಳಿದರು, "ಓಕೆ, ನಾವೆಲ್ಲಿದ್ದೆವು?.... ಓ... ಸರಿ ಸರಿ, ಪ್ರಶ್ನೋತ್ತರ ಸಮಯವಲ್ವಾ? ಯಾರು ಪ್ರಶ್ನೆ ಕೇಳುವವರಿದ್ದೀರಿ?"

ಈ ಬಾರಿ ಶಾಲಾ ಬಾಲಕಿಯೊಬ್ಬಳು ಕೈಯೆತ್ತಿದಾಗ ಲಾರ್ಜ್ ಆಕೆಯ ಹೆಸರೇನೂಂತ ಕೇಳಿದರು.
"ಮೋನಿಕಾ ಲೆವಿನ್‌ಸ್ಕಿ"
ಒಂದು ಕ್ಷಣ ಬುಷ್ ಮುಖ ತನ್ನ ಹಿಂದಿನ ಅಧ್ಯಕ್ಷ ಕ್ಲಿಂಟನ್ ನೆನಪಾಗಿ ಕಳೆಗುಂದಿತು. ಸಾವರಿಸಿಕೊಂಡು,
"ನಿನ್ನ ಪ್ರಶ್ನೆ ಕೇಳು ಮೋನಿಕಾ?"
"ನಂಗೆ ಕೇಳಲು 5 ಪ್ರಶ್ನೆಗಳಿವೆ."
"ಕೇಳು"

ಮೊದಲನೆಯದಾಗಿ, ವಿಶ್ವಸಂಸ್ಥೆಯ ಬೆಂಬಲವಿಲ್ಲದಿದ್ದಾಗ್ಯೂ ಅಮೆರಿಕವು ಇರಾಕ್ ಮೇಲೆ ಆಕ್ರಮಣ ಮಾಡಿದ್ದೇಕೆ?
ಸೆಕೆಂಡ್- ಅಲ್ ಗೋರೆಗೆ ಅಧಿಕ ಮತಗಳು ಸಿಕ್ಕಿದ್ದರೂ ನೀವೇಕೆ ಅಧ್ಯಕ್ಷರಾದಿರಿ?
ಥರ್ಡ್- ಒಸಾಮಾ ಬಿನ್ ಲಾಡೆನ್ನಿಗೇನಾಯಿತು?
ನಾಲ್ಕನೆಯದು- ಶಾಲೆಯ ವಿರಾಮ ಗಂಟೆ 20 ನಿಮಿಷ ಮೊದಲೇ ಬಾರಿಸಿದ್ದೇಕೆ?
ಕೊನೆಯದು- ಅಸತ್ಯಾನ್ವೇಷಿ ಎಲ್ಲಿ?!!!

+++++++++++++++++
(ಯುಪಿಎ ಸರಕಾರವು ದೇಶ್ ಸೇ ಗರೀಬೋಂ ಕೋ ಹಠಾವೋ ಆಂದೋಲನ ನಡೆಸುತ್ತಿರುವ ಬಗ್ಗೆ ಮೊನ್ನೆ ಪ್ರಕಟವಾದ ವರದಿಯಿಂದ ಕಿಡಿಕಿಡಿಯಾದ ಯುಪಿಎ ಅಂಗಹೀನ ಪಕ್ಷಗಳ ಕಾರ್ಯಕರ್ತರು ಪತ್ರಿಕೆಯ ಪ್ರತಿಗಳನ್ನು ಸುಟ್ಟು ಹಾಕಿದ ಕಾರಣ ನಿನ್ನೆಯ ಸಂಚಿಕೆ ತಡವಾಗಿ ದಮ್ ಮಾರೋ ಕಟ್ಟೆಗೆ ಬಂತು. ಅದಕ್ಕಾಗಿ ವಿಷಾದಿಸುತ್ತೇವೆ. ಆದರೆ ಒಬ್ಬ ಓದುಗರ ಚಂದಾ ಹಣ ಯಾವುದೇ ಕಾರಣಕ್ಕೆ ಹಿಂತಿರುಗಿಸಲಾಗುವುದಿಲ್ಲ. ಅದು ನೀವೇ ಆಗಿರಲೂ ಬಹುದು!!!-ಸಂ)

6 Comments

ಏನಾದ್ರೂ ಹೇಳ್ರಪಾ :-D

 1. ಮಾನ್ಯ ಸಂಪಾದಕರೇ,

  ನನ್ನ ಅನುಮಾನವನ್ನು ಸ್ವಲ್ಪ ಪರಿಹರಿಸಿ.

  ೧) ಅಸತ್ಯಾನ್ವೇಷಿ ನಿಮ್ಮ ಏಜೆಂಟಾ? 'ನಾನು ನಿಮಗೆ ಪಬ್ಲಿಕ್ಕಾಗಿ ಧಮಕಿ ನೀಡಿದ್ದೀನಿ, ಇನ್ಮೇಲೆ ಹಾಗೆ ಮಾಡಿದ್ರೆ ನನ್ನ ಗತಿ ಕಾಣಿಸ್ತೀನಿ' ಅಂತ ಇವತ್ತು ಮಧ್ಯಾಹ್ನ ನಡುಬೀದಿಯಲ್ಲಿ ನನ್ನ ಮೇಲೆ ರೋಪು ಹಾಕಿದ್ದಾರೆ. ನಿಮ್ಮ ಏಜೆಂಟ್ ನೋಡೋಕ್ಕೆ ಸ್ವಲ್ಪ ರೌಡಿ ತರಹಾನೇ ಕಾಣಿಸ್ತಾರೆ.

  ೨) ನಿನ್ನೆ ಅಮೆರಿಕೆಯಲ್ಲಿ ಖುಷ್ ಜೊತೆ ಸಂದರ್ಶನ ನಡೆಸಿ ಅಷ್ಟು ಬೇಗನೆ ಇವತ್ತು ಇಲ್ಲಿಗೆ ಬರಲು ಸಾಧ್ಯವೇ?

  ೩) ಅಮೆರಿಕೆಯಲ್ಲಿ ಗಂಟೆ ಹೊಡೆದರೆ ರೀಸಸ್ ಮಾಡ್ತಾರಾ? ಅದೂ ಪಬ್ಲಿಕ್ಕಾಗಿ? ಮಕ್ಕಳು ಮಾತ್ರವೋ ಅಥವಾ ದೊಡ್ಡವರೂನೋ?

  ೪) ಲೆವೆನ್ಸ್ಕಿ ನೋಡಿದ ಕೂಡಲೇ ಮುಖ ಕಳೆಗುಂದಿತು ಅಂದ್ರೆ ಆ ವ್ಯಕ್ತಿ ಖುಷ್ ಆಗಿರಲು ಸಾಧ್ಯವಿಲ್ಲ. ಕುಂಟನ್ ಇರ್ಬೇಕು - ಅಲ್ವೇ? ಲೆವೆನ್ಸ್ಕಿ ಕುಮ್ಮಕ್ಕು ಇಲ್ಲದೇ ಇದ್ದಲ್ಲಿ ಖುಷ್ ಅಧ್ಯಕ್ಷರಾಗಲು ಸಾಧ್ಯವಿರಲಿಲ್ಲ ಎಂದು ನಮ್ಮ ಮೂಲಗಳು ತಿಳಿಸುತ್ತಿವೆ.

  ಸರಿ ಉತ್ತರ ನೀಡದಿದ್ದರೆ, ಗೊತ್ತಲ್ಲ, ...

  ReplyDelete
 2. ashtyaanveshigaLe,

  nimma blagu bahala kutOhalakaariyaagide

  ReplyDelete
 3. ಬುಷ್ ಗೆ ಬಡಿಯಲು ಹೋದ ಅಸತ್ಯಾನ್ವೇಷಿಯದ್ದೊಂದು ದೊಡ್ಡ ಕಥೆ ಮಾರಾಯ್ರೆ.

  ಕಳೆದ ವರ್ಷ ಲಂಡನಿಗೆ ಹೋಗಿದ್ದಾಗ ಅಲ್ಲಿನ ವಿಜ್ಞಾನಿ ತಯಾರಿಸಿ ಕೊಟ್ಟ ತದ್ರೂಪಿಯೇ ಆ ಅಸತ್ಯಾನ್ವೇಷಿ.

  ಅದಿರ್ಲಿ, ನಿಮ್ಮನ್ನು ನಡುಬೀದಿ ನಾರಾಯಣನನ್ನಾಗಿಸಿ ಕುತ್ತಿಗೆಗೆ ರೋಪು ಹಾಕಿ ಎಳೆದದ್ದು ನಮ್ಮ ಅಸತ್ಯಾನ್ವೇಷಿ ಆಗಿರಲಿಕ್ಕಿಲ್ಲ. ಅವನ ನಕಲಿ ತದ್ರೂಪಿಯಾಗಿರಬಹುದೇ?

  ಅಮೆರಿಕದಿಂದ ಬಂದಿದ್ದು ನಾನು ಲಾಲು ಎಕ್ಸ್ ಪ್ರೆಸ್ ರೈಲಿನಲ್ಲಿ. ಆದಕಾರಣ ಬೇಗ ಬಂದೆ ಅಂತ ಅಷ್ಟೂ ಗೊತ್ತಾಗಲ್ವ?

  ಗಂಟೆ ಕೋಲಿನಿಂದ ಬಾರಿಸಿದರೆ ಮಕ್ಕಳಿಗೆ ರೀಸಸ್. ತಲೆಗೆ ಜೋರಾಗಿ ಬಡಿದರೆ...... !???

  ಆಮೇಲೆ, ಖುಷ್ ಮತ್ತೆ ಬುಸ್ssssss ಅಂತ ಅಧ್ಯಕ್ಷರಾಗಿದ್ದಕ್ಕೆ ಕ್ಲಿಂಟನ್ಗೆಳತಿಯ ಕೈವಾಡ ಸಾಬೀತಾಯಿತು. ಈಗ ನೀವು ಅಲ್ಲಿಗೆ ಸಾಕ್ಷಿ ಹೇಳಲು ಹೋಗಬೇಕಂತೆ.

  ReplyDelete
 4. ಓ ಕಾರಂತರೂರಿನವರಿಗೆ ಸ್ವಾಗತ ನಮ್ಮ ಬೊಗಳೆಗೆ.

  ಆದ್ರೆ ನೀವು ಬರೆದದ್ದು ನಮಗೆ ಬಹಳ ಕುಚೋದ್ಯಕಾರಿಯಾಗಿದೆ ಅಂತ ಕೇಳಿಸಿದ ಕಾರಣ ಮಂಡೆಬಿಸಿ....!!!
  :)

  ReplyDelete
 5. ಇದೀಗ ಬಂದ ಸುದ್ದಿ..

  ಅಸತ್ಯಾನ್ವೇಷಿಗಳು ಬುಷ್ ಕಾರ್ಯಕ್ರಮದಿಂದ ಕಾಣೆಯಾಗಿ ಹೋಗಿದೆಲ್ಲಿ ಎನ್ನುವ ಬಗ್ಗೆ ಎಂದು ಇಲ್ಲಿನ 'ನರಿ'(ಫಾಕ್ಸ್)ಸುದ್ದಿವಾಹಿನಿಯಲ್ಲಿ ಈಗ 'ಫ್ಲಾಶ್ ಸುದ್ದಿ'ಬಂದಿದೆ.ಅದರ ಪ್ರಕಾರ ಅಸತ್ಯಾನ್ವೇಷಿಗಳು ಮೋನಿಕಾ ಲೆವಿನ್‍ಸ್ಕಿ ಹೆಸರು ಕೇಳಿದ ಪ್ರಕಾರ ಶಾಲಾ ಗಂಟೆ ಬಾರಿಸುತ್ತಿದ್ದಂತೆ ಲೆವಿನ್‍ಸ್ಕಿ ಮನೆ ಹುಡುಕಿಹೋದರಂತೆ...ಛೇ ಛೇ

  ReplyDelete
 6. ಷ್ ಷ್ ಷ್ ಷ್ ಶಿವು ಅವರೆ,
  ಎಂಥಾ ಅವಾಂತರ ಮಾಡಿಬಿಟ್ರಿ,
  ಈ ತಾಣದಲ್ಲಿ ಅಪ್ಪಟ ಸತ್ಯಕ್ಕೆ ಅವಕಾಶವಿಲ್ಲ ಅಂತ ಗೊತ್ತಿದ್ರೂ, ನೀವು ಇದನ್ನೆಲ್ಲಾ ಬಟಾ ಬಯಲಾಗಿಸಿ ಅಸತ್ಯಾನ್ವೇಷಿಯ Cloneನ ಮರ್ಯಾದೆ ತೆಗೆಯೋದೆ...?

  ಇದು ಅನ್ಯಾಯ, ಅಕ್ರಮ, ಭ್ರಷ್ಟಾಚಾರ.....

  ReplyDelete

Post a Comment

ಏನಾದ್ರೂ ಹೇಳ್ರಪಾ :-D

Previous Post Next Post