![]() |
| AI Image |
ನವದೆಹಲಿ: ಜಿರಳೆಗಳನ್ನು ಬೆಳೆಸುವುದಕ್ಕಾಗಿ ಮತ್ತು ಅವುಗಳ ಸಂತತಿಯ ಹೆಚ್ಚಳಕ್ಕಾಗಿ ಗ್ರೇಸ್ಕಾನ್ ಪಾರ್ಟಿ ಆಯೋಜಿಸಿರುವ ರಾಜಧಾನಿ ಚಲೋ ರ್ಯಾಲಿಗೆ ಬೊಗಳೂರು ಪೊಲೀಸರು ಕೂಡ ಭಾರಿ ಬಂದೋಬಸ್ತ್ ಏರ್ಪಡಿಸಿದ್ದಾರೆ.
ಬಂದೋಬಸ್ತ್ಗಾಗಿ ದಿಲ್ಲಿ, ಬೊಗಳೂರು, ಆ ಊರು, ಈ ಊರುಗಳಿಂದ ಪೊಲೀಸರನ್ನು ಕರೆಸಿಕೊಳ್ಳಲಾಗುತ್ತಿದೆ. ಈಗಾಗಲೇ ನಡೆದಿರುವ ಜಂತರ್ ಮಂತರ್ ಪ್ರತಿಭಟನೆಗಳಲ್ಲಿ ಕೇವಲ ಆಕ್ರೋಶ ಮಾತ್ರ ಕಾಣಿಸುತ್ತಾ, ಬೇಡಿಕೆ ಈಡೇರಿಕೆಗೆ ಆಗ್ರಹಿಸುವ ಬದಲು ಅಲ್ಲೇ ಬಂದಿದ್ದ ಕಾರು, ಸ್ಕೂಟರು, ಬಿದಿಬದಿ, ಬ್ಯಾರಿಕೇಡ್ ಮುಂತಾದೆಡೆಗಳಲ್ಲೆಲ್ಲ ಬೆಂಕಿ ಹಚ್ಚಿರುವುದನ್ನು ಮನಗಂಡು ಈ ಬಾರಿ ಒಂದು ಸಾಸಿವೆ ಕಾಳು ಕೂಡ ಬೇಯದಂತೆ ನೋಡಿಕೊಳ್ಳಬೇಕೆಂಬ ನಿರ್ಧಾರಕ್ಕೆ ನಯಾದಿಲ್ಲಿ ಪೊಲೀಸರು ನಿರ್ಧರಿಸಿಬಿಟ್ಟಿದ್ದಾರೆ ಎಂದು ಹೆಸರು ಬಹಿರಂಗ ಮಾಡಲಿಚ್ಛಿಸದ ಮೂಲಗಳು ಬೊಗಳೂರಿನ ಏಕಸದಸ್ಯ ಬ್ಯುರೋಗೆ ತಿಳಿಸಿವೆ.
Follow ಬೊಗಳೆ-ರಗಳೆ On Facebook and Twitter.
ಈ ಸುದ್ದಿಯನ್ನು ಖಚಿತಪಡಿಸಿಕೊಳ್ಳಲೆಂದು ಅಸತ್ಯಾನ್ವೇಷಿ ನೇತೃತ್ವದ ಬ್ಯುರೋದ ಇಡೀ ತಂಡವೇ ದಿಲ್ಲಿಯತ್ತ ಧಾವಿಸಿದೆ. ಅಲ್ಲಿ ಬೊಗಳೂರಿನ ಪೊಲೀಸರನ್ನು ಕಂಡು ಬೆಚ್ಚಿಬಿದ್ದ ಬ್ಯುರೋ ಸದಸ್ಯರು ತಲೆಮರೆಸಿಕೊಳ್ಳಲೆಂದು ಮಾಸ್ಕ್ ಧರಿಸಿ ತಿರುಗಾಡಿ ತಿರುಗಾಡಿ, ಅಲ್ಲಲ್ಲೇ ಬಿದ್ದುಕೊಂಡಿದ್ದ ಸಾಕಷ್ಟು ಮಾಹಿತಿಯನ್ನು ಹೆಕ್ಕಿ ಹೆಕ್ಕಿ ಸಂಗ್ರಹಿಸಿಕೊಂಡಿದ್ದಾರೆ.
ಇದೀಗ ಬಂದ ಖಚಿತ ಮಾಹಿತಿಯನ್ವಯ, ಈ ಪ್ರತಿಭಟನೆಗೆ ಹಿಟ್ ಸ್ಪ್ರೇ ಮಾಡುವುದಕ್ಕಿಂತಲೂ ಉತ್ತಮ ಉಪಾಯವೊಂದನ್ನು ದಿಲ್ಲಿ ಪೊಲೀಸರು ಕಂಡುಹುಡುಕಿದ್ದಾರೆ. ಅದರಲ್ಲೊಂದು, ಈ ಜಿರಗಳೆಗಳನ್ನೆಲ್ಲ ಸಾಲಾಗಿ ನಿಲ್ಲುವಂತೆ ಹೇಳಿ, ಒಬ್ಬೊಬ್ಬರಿಗೆ ಒಂದೊಂದು ಪ್ರಶ್ನೆ ಕೇಳುವುದು. ಯಾಕೆಂದರೆ, ಈ ಪ್ರಶ್ನೆಗೆ ಬರುವ ಉತ್ತರಗಳನ್ನೆಲ್ಲ ಸಂಗ್ರಹಿಸಿದಲ್ಲಿ, ಅದು ಬೊಗಳೆ ರಗಳೆ ಪತ್ರಿಕೆಗೆ ಬಲುದೊಡ್ಡ ಎದ್ದುಬಿದ್ದು ನಗಿಸುವ ಸುದ್ದಿಯಾಗಬಹುದೆಂಬ ಎಣಿಕೆ ಅವರದು. ಅವರು ಕೇಳುವ ಪ್ರಶ್ನೆ ಒಂದೇ - ನೀವು ಇಲ್ಲಿ ಯಾಕೆ ಸೇರಿದ್ದೀರಿ, ಯಾಕೆ ಪ್ರತಿಭಟನೆ ನಡೆಸುತ್ತಿದ್ದೀರಿ?
ಇದಕ್ಕೆ ಈಗಾಗಲೇ ಕೆಲವು ಉತ್ತರಗಳನ್ನು ಸಂಗ್ರಹಿಸಲಾಗಿದೆ. ಅವುಗಳಲ್ಲಿ ಪ್ರಮುಖವಾದವೆಂದರೆ, ನಾವು ದಾರಿಯಲ್ಲಿ ಹೋಗ್ತಾ ಇದ್ದೆವಾ, ಬನ್ನಿ ರೀಲ್ಸ್ ಮಾಡಿ ಅಂತ ಎಳ್ಕೊಂಡು ಬಂದ್ರು ಅಂತೊಬ್ಬಳು ಹೇಳಿದರೆ, ಅದೇನೋ ಹಸಿವಾಗ್ತಿತ್ತು, ಬಿರಿಯಾನಿ ಕೊಡಿಸ್ತೀವಿ ಅಂತ ಕರ್ಕೊಂಡು ಬಂದವ್ರೆ ಅಂದವರು ಮತ್ತೊಬ್ಬರು. ಈ ರಾಜಕಾರಣಗಳಿಗೆ ಬೇರೆ ಕೆಲ್ಸ ಇಲ್ಲ, ಅಷ್ಟು ಖರ್ಚು ಮಾಡೋ ದುಡ್ಡನ್ನು ನೇರವಾಗಿ ನಮ್ಮ ಖಾತೆಗೆ ನೇರ ನಗದು ವರ್ಗಾವಣೆ (DBT - ಡೈರೆಕ್ಟ್ ಬೆನೆಫಿಟ್ ಟ್ರಾನ್ಸ್ಫರ್) ಮಾಡ್ತಿದ್ದಿದ್ರೆ, ಇಲ್ಲೇ ಸಿನಿಮಾ ನೋಡ್ಕೊಂಡು ಬರ್ಬೋದಿತ್ತು ಅಂತ ತಲೆಕೆರೆದುಕೊಂಡವರು ಮತ್ತೊಬ್ಬರು.
ಹೀಗಾಗಿ ಪ್ರತಿಭಟನೆಗೆ ಕಾರಣವೇನೆಂಬ ನಿಖರವಾದ ಉತ್ತರವನ್ನು ಸಂಗ್ರಹಿಸುವುದು ಕಷ್ಟದ ಮಾತೇ ಸರಿ ಎಂದುಕೊಂಡಿರುವ ಬೊಗಳೂರು ಪೊಲೀಸರು ಅಲ್ಲಿ ಮತ್ತೊಂದು ಪ್ಲ್ಯಾನ್ ಬಿ ರೆಡಿ ಮಾಡಿಟ್ಟುಕೊಂಡಿದ್ದಾರೆ.
ಈ ಬಾರಿ ಬೆಂಕಿ ಹಚ್ಚುವುದಕ್ಕಾಗಿ ಆಗಲೀ, ಉಸಿರಾಡುವುದಕ್ಕಾಗಲೀ, ಏದುಸಿರು, ನಿಟ್ಟುಸಿರು ಬಿಡುವುದಕ್ಕಾಗಲೀ ಆಸ್ಪದವೇ ಕೊಡದಂತೆ, ಪ್ರತಿಭಟನೆಗೆ ಬರುವವರಿಗಿಂತ ದುಪ್ಪಟ್ಟು ಮಂದಿ ಪೊಲೀಸರನ್ನು ನಿಯೋಜಿಸುವುದು. ಇದರಿಂದ ಪ್ರತಿಭಟನಾಕಾರರಿಗೆ ಯಾರು ಏನು ಎತ್ತ ಎಂದೆಲ್ಲ ತಿಳಿಯದೆ, ಅಡ್ಡಾಡುವುದಕ್ಕಾಗಲೀ, ಸಿನಿಮಾಕ್ಕೆ ಹೋಗುವುದಕ್ಕಾಗಲೀ, ಡ್ರಗ್ಸ್, ಪಿಜ್ಜಾ, ಬಾರ್, ಹೋಟೆಲ್ ಅಂತ ಹೋಗುವುದಕ್ಕಾಗಲೀ ಸಾಧ್ಯವಾಗದೇ, ಆ ದಿನ ಪ್ರತಿಭಟನೆ ಬಹುತೇಕ ಶಾಂತಿಯುತವಾಗಿರುತ್ತದೆಂಬ ಆಶಾವಾದದ ವಿಶ್ವಾಸ ಬೊಗಳೂರು ಪೊಲೀಸರದು. ಅಂದರೆ ಪೊಲೀಸ್ ಕಂಪನಿ ಕಂಪನಿಗಳನ್ನೇ ಅಲ್ಲಿ ತಂದು ಸ್ಥಾಪಿಸುವ ಪ್ಲ್ಯಾನ್ ಅಂತೆ.



0 ಕಾಮೆಂಟ್ಗಳು
ಏನಾದ್ರೂ ಹೇಳ್ರಪಾ :-D