ಬೊಗಳೆ ರಗಳೆ

header ads

Barking News | ರಾಜ್ಯದಲ್ಲಿ ಬರಲಿದೆ ಹೊಸ ಗ್ಯಾರಂಟಿ! ಉಸಿರೆತ್ತಿದರೆ ಕಷ್ಟ!

guarantee beneficiary sticker in Karnataka Bogaluru
AI Image

[ಬೊಗಳೂರು ಫಲಾನುಭವಿ ಬ್ಯುರೋದಿಂದ]

ಬೊಗಳೂರು: ಎಲ್ಲ ಫಲಾನುಭವಿಗಳ ಮನೆಗೆ ಸ್ಟಿಕ್ಕರ್ ಅಂಟಿಸುವುದು ಗ್ಯಾರಂಟಿ ಎಂದಾಕ್ಷಣ ಬೆಚ್ಚಿಬಿದ್ದಿರುವ ಬೊಗಳೆ ಏಕಸದಸ್ಯ ಬ್ಯುರೋದ ಸಕಲ ಸದಸ್ಯರೂ, ಇದರ ಹಿಂದಿನ ಕರಾಮತ್ತು, ಚಮತ್ಕೃತಿಗಳನ್ನು ಭೇದಿಸಲು ಹೊರಟಿದ್ದಾರೆ.

Follow ಬೊಗಳೆ-ರಗಳೆ On Facebook and Twitter.

ಇದುವರೆಗೆ, "ಪ್ರಾಣಿಗಳ ಮೇಲೆ ದಯೆ ಇರಲಿ" ಅಂತ ಕೆಸರುರಟ್ಟಿಸುವ ಎಲ್ಲ ಬಸ್‌ಗಳ ಹಿಂಭಾಗದಲ್ಲಿ ಸ್ಟಿಕರ್ ಅಂಟಿಸಿ ಸುದ್ದಿ ಮಾಡಿದ್ದ, ಸದ್ದು ಮಾಡಿದ್ದ ಮತ್ತು ದುಡ್ಡು ಮಾಡಿದ್ದ ಸ್ಟಿಕರ್ ಅಂಟಿಸುವ ಗುತ್ತಿಗೆದಾರರು, ಇದೀಗ ಗ್ಯಾರಂಟಿಗೂ ಸ್ಟಿಕರ್ ಅಂಟಿಸಲು ಬೆಚ್ಚಿ ಬಿದ್ದು, ನಿಧಾನಸೌಧದ ತುಂಬೆಲ್ಲ ಎದ್ದು ಬಿದ್ದು ಓಡಾಡಲಾರಂಭಿಸಿದ್ದಾರೆ. ಈ ಸ್ಟಿಕರನ್ನು ಕೂಡ ತಮಗೇ ಗುತ್ತಿಗೆ ನೀಡಬೇಕೆಂಬುದನ್ನು ಖಚಿತಪಡಿಸಿಕೊಳ್ಳುವುದಕ್ಕಾಗಿ ಎಂದು ಬೊಗಳೆ ಬ್ಯುರೋ ಪತ್ತೆ ಮಾಡಿದೆ.

ಇದೀಗ ಗ್ಯಾರಂಟಿ ಸವಲತ್ತು ಪಡೆಯುತ್ತಿರುವ ಅಸತ್ಯಾನ್ವೇಷಿ ನೇತೃತ್ವದ ಬೊಗಳೆ ಬ್ಯುರೋ ಕಚೇರಿಗೂ ಸ್ಟಿಕರ್ ಅಂಟಿಸಲು ಬಂದಿರುವ ಹಿನ್ನೆಲೆಯಲ್ಲಿ, ಮಿಕಕ್ಕಾಗಿ ಕಾಯುತ್ತಿದ್ದ ಹುಲಿಯ ಬಾಯಿಗೇ ಮಿಕ ಬಂದು ಬಿದ್ದಂತಾಯಿತು.

ಮಹಿಳೆಯರಿಗೆ ಬಸ್ ಪ್ರಯಾಣ ಗ್ಯಾರಂಟಿ, ಪುರುಷರಿಗೆ ದರ ಏರಿಸಿದ್ದನ್ನು ಕಟ್ಟುವುದನ್ನು ಗ್ಯಾರಂಟಿ ಮಾಡಿಸಿರುವ ಬೊಗಳೂರು ಸರ್ಕಾರದಿಂದಾಗಿ ಸಂತ್ರಸ್ತರ ಪಟ್ಟಿಗೆ ಸೇರಿಕೊಂಡಿರುವ ಬೊಗಳೆ ಬ್ಯುರೋ ಕೂಡ ಒಂದು ರೀತಿಯಲ್ಲಿ ಮತ್ತೆ ಎಲ್ಲಿಂದ ದುಡ್ಡು ತರುವುದು, ಮತ್ತೆ ಯಾವುದರ ದರ ಏರಿಸುತ್ತಾರೆ ಎಂಬ ಭೀತಿಯಲ್ಲೇ ಕಾಲ ಕಳೆಯುತ್ತಿದೆ. ಮೂಲಭೂತ ಆವಶ್ಯಕತೆಗಳಾದ ಬಸ್ ಪ್ರಯಾಣ ದರ, ಶೈಕ್ಷಣಿಕ ಶುಲ್ಕ, ನೀರಿನ ದರ, ಹಾಲಿನ ದರ, ಕರೆಂಟಿನ ದರ, ಪಾರ್ಕಿಂಗ್ ದರ, ಪಾರ್ಕಲ್ಲಿ ನಡೆದಾಡುವುದಕ್ಕೆ ಶುಲ್ಕ ಇತ್ಯಾದಿಯಿಂದಾಗಿ ಆತಂಕದಿಂದಲೇ ಈ ಬಗ್ಗೆ ಅಸತ್ಯಾನ್ವೇಷಣೆಗೆ ಹೊರಟಿರುವ ಬೊಗಳೆ ಏಕಸದಸ್ಯ ಬ್ಯುರೋದ ಎಲ್ಲ ಪುರುಷ ಸದಸ್ಯರೂ, ನಿಧಾನಸೌಧದತ್ತ ತೆರಳುತ್ತಿದ್ದರು.

ಇವರನ್ನೆಲ್ಲ ನೋಡಿಯೇ ಪ್ರತಿಭಟನಾಕಾರರು ಅಂತ ತಿಳಿದುಕೊಂಡು ಬ್ಯಾರಿಕೇಡ್ ಹಾಕಿದ್ದ ಪೊಲೀಸರಿಗೆ 'ಪ್ರೆಸ್' ಮಾಡುವ ಪಾಸ್ ತೋರಿಸಿ ಒಳಹೊಕ್ಕಾಗ, ನೂರಾರು ಗುತ್ತಿಗೆದಾರರು ತಮ್ಮ ವೈವಿಧ್ಯಮಯ ಸ್ಟಿಕರ್‌ಗಳನ್ನು ಅಲ್ಲಿ ಹರವಿಟ್ಟು, ಇದರಿಂದ ಯಾವುದು ಬೇಕಾದರೂ ಆಯ್ಕೆ ಮಾಡಿಕೊಳ್ಳಿ ಅಂತ ಹರಾಜು ಹಾಕುವ ರೀತಿ ಕೂಗಾಡುತ್ತಿದ್ದರು. ನಾವೇ ಕಮಿಶನ್ ಜಾಸ್ತಿ ಕೊಡ್ತೇವೆ ಎಂಬ ಆಫರ್ ಕೂಡ ನೀಡುತ್ತಿದ್ದಾರೆ!

ಅವರನ್ನೆಲ್ಲ ಮಾತನಾಡಿಸಿಕೊಂಡು ಸಮಗ್ರ ವರದಿ ಮಾಡಲೆಂದು ಬಂದ ನಮ್ಮ ಏಕಸದಸ್ಯ ಬ್ಯುರೋದ ಎಲ್ಲ ಸದಸ್ಯರಿಗೆ ಕೊನೆಗೂ ಅಸತ್ಯದ ಸಮಗ್ರ ದರ್ಶನವಾಯಿತು. ಗ್ಯಾರಂಟಿ ಅನುಷ್ಠಾನ ಸಮಿತಿಗಾಗಿ ಕೋಟಿ ಕೋಟಿ ಖರ್ಚು ಮಾಡುತ್ತಿದ್ದೇವೆ, ಈಗಾಗಲೇ ಇರುವ ಎಲ್ಲ ರೀತಿಯ ಗ್ಯಾರಂಟಿಗೂ ಹಣ ಹೊಂದಿಸಲಾಗಲಿಲ್ಲ. ಇದಕ್ಕಾಗಿ ಹೊಸ ಶುಲ್ಕ ವಿಧಿಸಲು ಅಲ್ಲೊಂದು ಸಮಗ್ರ ಮಾತುಕತೆ ನಡೆಯುತ್ತಿದ್ದ ವಿಷಯ ಅಸತ್ಯ ಅನ್ವೇಷಿಯ ಕಣ್ಣಿಗೆ ಬಿತ್ತು. ಅವರು ಗುಸುಗುಸು ಪುಸುಪುಸು ಅಂತ ಉಸಿರೆಳೆದುಕೊಂಡು, ಯಾರಿಗೂ ಕೇಳಿಸದಂತೆ ಚರ್ಚಿಸುತ್ತಿದ್ದ ವಿಚಾರವು ಬೊಗಳೆ ಬ್ಯುರೋದಲ್ಲೇ ಸ್ಫೋಟವಾಗಿದೆ.

ನಿಟ್ಟುಸಿರಿಗೆ ಶುಲ್ಕ ಏರಿಕೆ:

ರಾಜ್ಯದಲ್ಲಿ ಈಗಾಗಲೇ ಎಲ್ಲ ರೀತಿಯ ಬೆಲೆ ಏರಿಕೆಗೆ ದುಡ್ಡು ತೆತ್ತೂ ತೆತ್ತೂ ಇನ್ನು ತಮ್ಮಿಂದ ಸಾಧ್ಯವಿಲ್ಲ ಎಂದು ನಿಟ್ಟುಸಿರು ಬಿಟ್ಟರೂ, ಇನ್ನು ಮುಂದೆ ಅದಕ್ಕೂ ಶುಲ್ಕ ವಿಧಿಸಲಾಗುತ್ತದೆಯಂತೆ! ಬೊಗಳೂರಿನ ಕೆಲವೆಡೆ ಈಗಾಗಲೇ ಶುಲ್ಕ ವಿಧಿಸಲಾಗುತ್ತಿದ್ದರೆ, ಅಲ್ಲಿ ಆ ಶುಲ್ಕವನ್ನು ಶೇ.50ರಷ್ಟು ಏರಿಸಲಾಗುತ್ತದೆ! ಈ ಶುಲ್ಕದಿಂದಲಾದರೂ ಧಾರಾವಾಹಿಪ್ರಿಯ ಮಹಿಳಾ ಮತದಾರರಿಗೆ ನೀಡಲಾಗುವ ಎಲ್ಲ ಗ್ಯಾರಂಟಿಗಳಿಗೆ ಹಣ ಹೊಂದಿಸಬಹುದು, ಅವರ ಒಲವು ಗಳಿಸಿಕೊಂಡು ಮುಂದಿನ ಚುನಾವಣೆಯಲ್ಲಿ ಉಚಿತ ಸೀರೆ ಕುಪ್ಪಸ ಒದಗಿಸುವ ಗ್ಯಾರಂಟಿಯನ್ನೂ ಘೋಷಿಸಬಹುದೆಂಬ ತಂತ್ರಗಾರಿಕೆ ನಡೆಯುತ್ತಿದೆಯೆಂಬ ಗುಪ್ತ ವರ್ತಮಾನವು ಗುಪ್ತವಾಗಿಯೇ ಇರಲಿ ಅಂತ ಹೆಸರು ಹೇಳಲಿಚ್ಛಿಸದ ಶೋಷಕರು ಬೊಗಳೆ ಬ್ಯುರೋದಲ್ಲಿ ವಿನಂತಿಸಿಕೊಂಡರು.

ಹೀಗಾಗಿಯೇ ನಾವು ಯಾರಿಗೂ ಈ ವಿಷಯ ತಿಳಿಸುತ್ತಿಲ್ಲ, ಬಟಾಬಯಲು ಮಾಡುತ್ತಿಲ್ಲ ಅಂತ ಈ ಮೂಲಕ ದೃಢೀಕರಿಸುತ್ತೇವೆ. ಈ ದೃಢೀಕರಣಕ್ಕೆ ಸ್ಟ್ಯಾಂಪ್ ಪೇಪರ್ (ಠಸೆ ಕಾಗದ)ಕ್ಕೆ ನೀಡಲು ಬೊಗಳೆ ಬ್ಯುರೋದ ಬಳಿ ಹಣವಿಲ್ಲದಿರುವ ಕಾರಣದಿಂದಾಗಿ, ಇಲ್ಲೇ ದೃಢೀಕರಿಸಲಾಗುತ್ತಿದೆ ಎಂದು ಸ್ಪಷ್ಟಪಡಿಸುತ್ತಿದ್ದೇವೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು