[ಬೊಗಳೂರು ಶೌಚಾಲಯ ಬ್ಯುರೋದಿಂದ]
ಬೊಗಳೂರು, ಜೂ.7- ಸ್ಮಾರ್ಟ್ ಕಾರ್ಡ್ ಹೊಂದಿರುವವರು ಮಾತ್ರವೇ ಶೌಚಾಲಯ ಬಳಸಬೇಕು, ಉಳಿದವರು ಬಳಸಬಾರದು ಎಂದ ಆಯೋಮಯೋಜನಾ ಆಯೋಗವು ಸೂಚಿಸಿರುವುದರಿಂದಾಗಿ ದೇಶದಲ್ಲಿ ಬಡವರ ಸಂಖ್ಯೆ ಕಡಿಮೆಯಾಗಿದೆ ಎಂದು ಕೇಂದ್ರದ ಬೊಗಳೆ ಸರಕಾರವು ಘೋಷಿಸಿದೆ.

ದೇಶದ ಮೂಲೆ ಮೂಲೆಯ ಶೌಚಾಲಯಗಳನ್ನು 35 ಲಕ್ಷಕ್ಕೂ ಹೆಚ್ಚು ವೆಚ್ಚದಲ್ಲಿ ನವೀಕರಣಗೊಳಿಸಬೇಕು. ಆಗಷ್ಟೇ ಈ ಆರ್ಥಿಕ ಬಿಕ್ಕಟ್ಟಿನ ಪರಿಸ್ಥಿತಿಯಲ್ಲಿ ಭಾರತವು ನಂ.1 ಅಂತ ಕರೆಸಿಕೊಳ್ಳುವುದು ಸಾಧ್ಯ ಎಂದು ಮಾನ್ಯ ನಿಧಾನಮಂತ್ರಿಗಳು ಘೋಷಿಸಿರುವುದಾಗಿ ವಿಪಿತ್ತ ಸಚಿವರು ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಇದೆಲ್ಲವೂ ಸಾಧ್ಯ. ಆರ್ಥಿಕತೆಯಲ್ಲಿ ಚೀನಾ, ಅಮೆರಿಕವನ್ನೆಲ್ಲಾ ನಾವು ಹಿಂದಿಕ್ಕಬಹುದು ಎಂದು ವಿಪಿತ್ತ ಸಚಿವರು ಹೇಳಿದಾಗ ಕುತೂಹಲಗೊಂಡ ಅಸತ್ಯಾನ್ವೇಷಿ ಮತ್ತೊಂದು ಪ್ರಶ್ನೆಯ ಬಾಣವನ್ನೇ ಎಸೆದಾಗ ಈ ರೀತಿಯಾಗಿ ತತ್ತರಿಸುವ ಉತ್ತರ ಬಂದಿತ್ತು.

ಅದು ಹೇಗೆ ಎಂದು ಕೇಳಲಾಗಿ, "ಆಹಾರ ಪದಾರ್ಥಗಳ ಬೆಲೆ ಏರಿಕೆಯಿಂದ ಪ್ರಜೆಗಳು ತತ್ತರಿಸಿದ್ದು ಹೌದು. ಹಾಗಿರುವಾಗ ಹಸಿವು ನೀಗಿಸಲು ತಿನ್ನುವುದನ್ನಾದರೂ ಏನನ್ನು ಮತ್ತು ಹೇಗೆ ಸಾಧ್ಯ? ಕಡಿಮೆ ತಿನ್ನುವಾಗ ಶೌಚಾಲಯಗಳ ಅಗತ್ಯವೂ ಕಡಿಮೆ ಇರುತ್ತದೆ. ಹೀಗಾಗಿ ಹಣವಿದ್ದವರು ಮಾತ್ರವೇ ತಿಂದುಂಡು, ಸ್ಮಾರ್ಟುಕಾರ್ಡುಗಳನ್ನು ಮಾಡಿಸಿಕೊಂಡು ಶೌಚಾಲಯ ಬಳಸಬಹುದು. ಇದರಿಂದಾಗಿ ದೇಶದೆಲ್ಲೆಡೆ ಶೌಚಾಲಯಗಳು ಎಸಿ, ಫ್ಯಾನು, ಇತ್ಯಾದಿಗಳೊಂದಿಗೆ ಫಳ ಫಳ ಹೊಳೆಯುವಂತಿರುತ್ತದೆ" ಎಂದು ಆಯೋಮಯೋಜನಾಯೋಗದ ಉಪಾಧ್ಯಕ್ಷರು ಬೊಗಳೆ ರಗಳೆ ಬ್ಯುರೋದ ಬಳಿ ಹೇಳಿಕೊಂಡಿದ್ದಾರೆ.

ಆದರೆ, ನಾವು ಶೌಚಾಲಯದೊಳಗೆ ಹಣ ತೆತ್ತು ಒಳಗೆ ಹೋಗಬೇಕು ಎಂದಷ್ಟೇ ಹೇಳಿದ್ದೇವೆಯೇ ಹೊರತು, ಹೊರಗೆ ಬರಬೇಕು ಎಂದು ಎಲ್ಲಿಯೂ ಬರೆದುಹಾಕಿಲ್ಲ ಎಂದೂ ವಿಪಿತ್ತ ಸಚಿವರು ಸ್ಪಷ್ಟನೆ ನೀಡಿದ್ದಾರೆ.

ಅದೂ ಅಲ್ಲದೆ, ಇತ್ತೀಚೆಗೆ ಶೌಚಾಲಯಗಳಲ್ಲಿಯೂ ಕಳವು ಪ್ರಕರಣಗಳು ನಡೆಯುತ್ತಿರುವುದರಿಂದ ಹೆಚ್ಚಿನ ಭದ್ರತೆ ಒದಗಿಸಲು, ವಿದ್ಯುದ್ದೀಪಾಲಂಕಾರಕ್ಕಾಗಿ ಮುಂತಾಗಿ ಹೆಚ್ಚಿನ ಬಜೆಟ್ ಅಗತ್ಯವಿರುತ್ತದೆ. ಮುಂದಿನ ಬಜೆಟಿನಲ್ಲಿ ಇದನ್ನು ಪ್ರಸ್ತಾಪಿಸಿ, ಶೌಚಾಲಯ ನವೀಕರಣ ನಿಧಿ ಕಾಯ್ದಿರಿಸುವಂತೆ ನಿಧಾನಿಯವರಿಗೆ ಪತ್ರ ಬರೆಯುವುದಾಗಿ ಹೇಳಿದರು.

ಇತ್ತಿತ್ತಲಾಗಿ ಪೆಟ್ರೋಲ್ ಬೆಲೆ ಏರುತ್ತಿರುವುದರಿಂದ ಶೌಚಾಲಯಗಳು ಕೂಡ ಮುಂದೆ ಇಂಧನದ ಮೂಲವಾಗುವ ಸಾಧ್ಯತೆಗಳು ದಟ್ಟವಾಗಿವೆ. ಈ ಬಯೋ ಫ್ಯುಯೆಲ್ ನಿರ್ಮಾಣಕ್ಕೂ ಹೆಚ್ಚಿನ ಬಜೆಟ್ ಕಾಯ್ದಿರಿಸಿ ಅದನ್ನು ಅಧಿಕಾರಿಗಳಿಗೆ, ಮಂತ್ರಿ ಮಾಗಧರಿಗೆ ಅಧಿಕೃತವಾಗಿಯೇ ಹಂಚುವ ಮೂಲಕವಾಗಿ, ಯಾರೂ ಕೂಡ ಹಣ ಮಾಡುವುದು 'ಅಕ್ರಮ' ಎಂದಾಗದಂತೆ ನೋಡಿಕೊಳ್ಳುತ್ತೇವೆ. ಈ ಮೂಲಕ ಭ್ರಷ್ಟಾಚಾರವನ್ನೂ ತಡೆಗಟ್ಟಬಹುದಾಗಿದೆ ಎಂದು ಮಾನ್ಯ ನಿಧಾನಮಮಂತ್ರಿಗಳು ಅಭಿಪ್ರಾಯಪಟ್ಟಿರುವುದಾಗಿ ಬೊಗಳೆ ರಗಳೆ ಬಿಟ್ಟು ಉಳಿದೆಲ್ಲ ಮಾಧ್ಯಮಗಳಲ್ಲಿ ವರದ್ದಿಯಾಗಿಲ್ಲ.

10 Comments

ಏನಾದ್ರೂ ಹೇಳ್ರಪಾ :-D

 1. ಬಡವರ ನಿರ್ಮೂಲನಾ ಯೋಜನೆಯಡಿ ಶೌಚಾಲಯದಲ್ಲಿ ದಿಟ್ಟ ಹೆಜ್ಜೆ..! ಅದು ದೊಡ್ಡಸ್ತಿಕೆ..!!!

  ReplyDelete
  Replies
  1. ಚಿತ್ತಾರರೇ,
   ದಡ್ಡಸ್ತಿಕೆಯೂ ಹೌದಲ್ವಾ...

   Delete
 2. ಶೌಚಾಲಯಗಳಲ್ಲಿ ಕಳುವಾಗದಿರಲು,CC TV ಹಾಕುವುದು ಉಚಿತ ಎಂದು ಅಯೋಮಯೋಜನಾ ಆಯೋಗಕ್ಕೆ ನನ್ನ ವಿನಮ್ರ ಸೂಚನೆ. CC TV, Spy camera ಇವುಗಳಿಗಾಗಿ ನೂರು ಕೋಟಿ ಖರ್ಚು ಮಾಡಲು ಅಡ್ಡಿ ಇಲ್ಲ. Big ass needs a big toilet!

  ReplyDelete
  Replies
  1. ಅದು ಹಳೆಕಥೆ ಸ್ವಾಮಿ, ಈಗ ಆ CCTV ಗಳೆಲ್ಲ ಕಳುವಾಗಿವೆ!LOL

   Delete
  2. ಸುನಾಥರೇ,
   ಅಯೋಮಯೋಜನಾ ಆಯೋಗಕ್ಕೆ ನಿಮ್ಮ ಸೂಚನೆ ತಲುಪುತ್ತಿಲ್ಲ. ಯಾಕೆಂದರೆ ಸಿಸಿಟಿವಿಗಳು ಹಾಳಾಗಿವೆಯಂತೆ. ಹೀಗಾಗಿ ಸೂಚನೆಗಳನ್ನು ಶೌಚಾಲಯದ ಗುಂಡಿಗೆ ಹಾಕಿದರೆ, ಅದು ಅಧಿಕಾರಿಗಳ ಮುಖಕ್ಕೆ ತಲುಪಬಹುದು ಅಂತ ನಮ್ಮ ಅನಿಸಿಕೆ.

   Delete
  3. ಕುವೇಟಿನ ಸುರೇಶರೇ,
   ನಿಮ್ಮ ಲಾಲಿ (lol) ಹಾಡಿನ ಅನರ್ಥವೇನು??? :-)

   Delete
 3. ಅನ್ವೇಷಿಯವರೆ,
  ಈ ಖರ್ಚಿನಲ್ಲಿ ತಪ್ಪೇನಿಲ್ಲ. ಏಕೆಂದರೆ Big ass needs a big toilet! ಇನ್ನು ಶೌಚಾಲಯಗಳಲ್ಲಿ ಕಳವಾಗುವುದನ್ನು ತಪ್ಪಿಸಲು, ಅಲ್ಲಿ CC TV, Spy Camera ಮೊದಲಾದ ಸಾಧನಗಳನ್ನು ಅಳವಡಿಸಬೇಕು ಎಂದು ಅಯೋಮಯೋಜನಾ ಆಯೋಗಕ್ಕೆ ನಮ್ರ ಸೂಚನೆ ಸಲ್ಲಿಸುತ್ತೇನೆ.

  ReplyDelete
  Replies
  1. ಸುನಾಥರೇ, ದೊಡ್ಡ ದೊಡ್ಡ ಕತ್ತೆಗಳಿಗೆ ಮುಳುಗುವಷ್ಟಾದರೂ ದೊಡ್ಡ ಟಾಯ್ಲೆಟ್ಟು ಬೇಕಲ್ವಾ.... ಮತ್ತೊಮ್ಮೆ ನಿಮ್ಮ ಸೂಚನೆಗೆ ಅದೇ ಸಲಹೆ ನೀಡಲಾಗುತ್ತಿದೆ.

   Delete
 4. ತುಂಬ ಒಳ್ಳೆಯ ಯೋಜನೆ. ಸ್ಮಾರ್ಟ್ ಕಾರ್ಡ್ ಜೊತೆಗೆ online booking ಅನ್ನೂ ತಂದರೆ ನನ್ನಂತಹವರಿಗೆ ಅನುಕೂಲ !.

  ReplyDelete
  Replies
  1. ಸುಬ್ರಹ್ಮಣ್ಯರೇ,
   ಈ ಥರಾ ಮಾಸ್ ಬುಕಿಂಗ್ ಮಾಡಿ ನೀವೇನನ್ನು ಕಡಿದು ಗುಡ್ಡೆ ಹಾಕಬೇಕೆಂದಿದ್ದೀರಿ ಎಂಬುದು ಸಂಚೋದಿಸಬೇಕಾದ ಸಂಗತಿ.

   Delete

Post a Comment

ಏನಾದ್ರೂ ಹೇಳ್ರಪಾ :-D

Previous Post Next Post