[ಬೊಗಳೂರು ಮಕ್ಕಳೋತ್ಪಾದನಾ ಬ್ಯುರೋದಿಂದ]
ಬೊಗಳೂರು, ಮಾ. 26- ಬೊಗಳೂರಿನಲ್ಲಿ ಹಾಲಾಹಲ, ಕೋಲಾಹಲ, ಆಲ್ಕೋಹಾಲ ಎಲ್ಲವೂ ಎದ್ದಿದೆ. ಇದಕ್ಕೆ ಕಾರಣ ನಮ್ಮ ಬದ್ಧ ಪ್ರತಿಸ್ಪರ್ಧಿ ಪತ್ರಿಕೆ ಪ್ರಕಟಿಸಿದ ಒಂದು ವರದ್ದಿ.

ಮಕ್ಕಳು ಬೇಕಿದ್ದರೆ, ದಿನಕ್ಕೆರಡು ಕಪ್ ಚಹಾ ಕುಡಿಯಿರಿ ಎಂಬ ಸಂಚೋದ್ಯದ ವರದ್ದಿಯೇ ಎಲ್ಲಾ ಗುಂಡಾಂತರಗಳಿಗೆ, ಗಂಡಾಂತರಗಳಿಗೆ ಕಾರಣವಾಗಿದೆ ಎಂದು ಬಲ್ಲ ಮೂಲಗಳು ತಿಳಿಸಿವೆ.

ಇತ್ತೀಚೆಗೆ ಬೊಗಳೂರಿನಲ್ಲಿ ಚಹಾ ಮಾರಾಟದ ಪ್ರಮಾಣವು ಏರಿಕೆಯಾಗಿರುವುದು ಮತ್ತು ಜೊತೆ ಜೊತೆಗೇ ಬೊಗಳೂರಿನ ಜನಸಂಖ್ಯೆಯೂ ಏರಿಕೆಯಾಗುತ್ತಿರುವುದರ ಹಿಂದೆ ಯಾವ ಮತ್ತು ಯಾರ ಕೈವಾಡವಿದೆ ಎಂದು ಬೊಗಳೂರಿನ ಸರಕಾರವು ಬೊಗಳೆ ರಗಳೆಗೆ ತನಿಖಾ ವರದ್ದಿ ಒಪ್ಪಿಸುವಂತೆ ಸೂಚನೆ ನೀಡಿತ್ತು.

ಈ ಕುರಿತು ಬೇರೆಯವರು ಯಾರೋ ತನಿಖೆ ಕೈಗೊಂಡು ವರದ್ದಿ ಪ್ರಕಟಿಸಿದಾಗಲೇ, ಎಲ್ಲದಕ್ಕೂ ಕಾರಣ ಚಹಾ ಸೇವನೆ ಎಂಬ ಅಂಶ ಪತ್ತೆಯಾಗಿತ್ತು.

ಬಿಸಿಬಿಸಿ ಚಹಾ ಕುಡಿದರೆ ಗರ್ಭಿಣಿಯಾಗುವ ಸಾಧ್ಯತೆಗಳು ಶೇ.27ರಷ್ಟು ಹೆಚ್ಚಾಗುತ್ತದೆ ಎಂಬುದು ಈ ಸಂಚೋದನಾ ವರದ್ದಿಯ ಸಾರಾಂಶ. ಆದರೆ, ಅದನ್ನು ಬೋಸ್ಚನ್ ಚಹಾ ಕೂಟ ಖ್ಯಾತಿಯ ಬೋಸ್ಟನ್ ಯುನಿವರ್ಸಿಟಿಯವರೇ ಪ್ರಕಟಿಸಿರುವುದು, ಇದು ಬೋಸ್ಟನ್ ಚಹಾದ ಜಾಹೀರಾತು ಉತ್ತೇಜನಾ ತಂತ್ರವೇ ಎಂಬ ಬಗ್ಗೆ ತನಿಖೆ ನಡೆಸಲು, ಅವರು ನಮ್ಮ ಜಾಹೀರಾತುದಾರರಾಗಿರುವುದರಿಂದಾಗಿ ಸಾಧ್ಯವಾಗುತ್ತಿಲ್ಲ ಎಂದು ಬೊಗಳೂರು ಸೊಂಪಾದಕರು ಸ್ಪಷ್ಟಪಡಿಸಿದ್ದಾರೆ.

2 Comments

ಏನಾದ್ರೂ ಹೇಳ್ರಪಾ :-D

  1. ಚಹಾ ಕುಡಿಯುವದರಿಂದ ನಿದ್ದೆ ಕಡಿಮೆಯಾಗುತ್ತದೆ ಎನ್ನುವದಷ್ಟೇ ಗೊತ್ತು. ಅದಕ್ಕೂ ಜನಸಂಖ್ಯಾ ಹೆಚ್ಚಳಕ್ಕೂ ಇರುವ ಸಂಬಂಧ ಶಿವನೇ ಬಲ್ಲ!

    ReplyDelete
  2. ಸುನಾಥರೇ,
    ನಿದ್ದೆಗೆಡುವುದರಿಂದಲೇ ಜನ ಸಂಖ್ಯೆ ಹೆಚ್ಚೋದು ಅಂತ ಎಲ್ಲೋ ಓದಿದ ನೆನಪು...

    ReplyDelete

Post a Comment

ಏನಾದ್ರೂ ಹೇಳ್ರಪಾ :-D

Previous Post Next Post