(ಬೊಗಳೂರು ರಾಜ್ಯ ಆಗ್ರಹ ಬ್ಯುರೋದಿಂದ)
ಬೊಗಳೂರು, ಡಿ.11- ತೆಲಂಗಾಣ ರಾಜ್ಯ ಘೋಷಣೆಗೆ ಕೇಂದ್ರ ಸರಕಾರ ನಿರ್ಧರಿಸಿರುವ ಬೆನ್ನಲ್ಲೇ, ಬೊಗಳೂರು ಸೇರಿದಂತೆ ಅಲ್ಲಲ್ಲಿ ರಾಜ್ಯ-ರಾಷ್ಟ್ರ ಘೋಷಣೆಯ ಕೂಗುಗಳು ಕೇಳಿಬರತೊಡಗಿವೆ.
ಇದೀಗ ಬೋಡೋಲ್ಯಾಂಡ್, ಗೂರ್ಖಾಲ್ಯಾಂಡ್, ಕಾಶ್ಮೀರ, ಕೊಡಗು, ಸೌರಾಷ್ಟ್ರ, ವಿದರ್ಭ, ಬುಂದೇಲ್‌ಖಂಡ, ಪೂರ್ವಾಂಚಲ, ಸೌರಾಷ್ಟ್ರ, ಮಿಥಿಲಾಂಚಲ, ಮಹಾಕೋಸಲ ಮುಂತಾದ ರಾಜ್ಯಗಳಿಗೂ ಬೇಡಿಕೆ ಹೆಚ್ಚಾಗುತ್ತಿದ್ದು, ಅಲ್ಲಲ್ಲಿ ಉಪವಾಸ ಸತ್ಯಾಗ್ರಹಗಳು ಕೂಡ ಆರಂಭವಾಗಿದೆ.
ಕೆಲವರು ಸಾಯುವವರೆಗೂ ನಾಲ್ಕು ದಿನ ಉಪವಾಸ ಮಾಡ್ತೀವಿ ಅಂತ ಪ್ರತಿಭಟನೆಗೆ ಇಳಿದಿದ್ದರೆ, ಇನ್ನು ಕೆಲವರು ನಾವು ಒಂದೆರಡು ದಿನ ಮಾತ್ರವೇ ಆಮರಣಾಂತ ಉಪವಾಸ ಮಾಡ್ತೀವಿ ಅಂತ ಬೊಗಳೆ ಬಿಡ್ತಿದ್ದಾರೆ. ಒಟ್ಟಿನಲ್ಲಿ ಉಪವಾಸ ಉಪವಾಸವೇ ಎಂಬುದು ಗೊತ್ತಾಗಿದೆ. ಅಂದರೆ ಮುಂದಿನ ಬಾರಿ ನೀರು-ಆಹಾರ-ಪಾನೀಯ ಸೇವಿಸುವವರೆಗೂ ಅದು ಉಪವಾಸವೇ ಆಗಿರುತ್ತದೆ ಎಂಬ ಅಮೂಲ್ಯ ದಾರ್ಶನಿಕ ತತ್ವವನ್ನು ಬೊಗಳೂರು ಬ್ಯುರೋ ಕಂಡುಹಿಡಿದಿದೆ.
ಇದೀಗ, ಅಲ್ಲಲ್ಲಿ ಪ್ರತ್ಯೇಕ ದೇಶ-ರಾಜ್ಯ ಸ್ಥಾಪನೆಗಾಗಿ ಇಷ್ಟೆಲ್ಲಾ ಹೈಪ್ ಹೆಚ್ಚಾಗಿದ್ದರ ಹಿಂದಿನ ಕಾರಣವನ್ನು ಬೊಗಳೂರು ಕೊನೆಗೂ ಪತ್ತೆ ಮಾಡಿದೆ.
ದೇಶಾದ್ಯಂತ ಆಹಾರಧಾನ್ಯಗಳು ಮತ್ತು ನಿತ್ಯೋಪಯೋಗಿ ವಸ್ತುಗಳ ಬೆಲೆ ಹೆಚ್ಚಳವಾಗಿದೆ. ಜನರು ಹಸಿವಿನಿಂದ ಹೊಟ್ಟೆಗಿಲ್ಲದೆ ಅಲ್ಲಲ್ಲಿ ಸಾಯುವ ಹಂತದಲ್ಲಿದ್ದಾರೆ. ಲಿಬರ್ಹಾನ್, ಭಾರತ-ಪಾಕ್ ಸಂಬಂಧ, ಕೋಪನ್ ಹೇಗನ್‌ನಲ್ಲಿ ಹೇಗೆ ಏಗೋಣ ಅಂತೆಲ್ಲಾ ಬ್ಯುಸಿಯಾಗಿರುವಾಗ ಈ ಬಗ್ಗೆ ಗಮನ ಹರಿಸಲು ಸರಕಾರಕ್ಕೂ ಪುರುಸೊತ್ತಿಲ್ಲ. ಹೀಗಾಗಿ ಬೆಲೆ ನಿಯಂತ್ರಣಕ್ಕೆ ದೇವರೇ ಕೊಟ್ಟ ಅವಕಾಶವಿದು. ಎಲ್ಲರೂ ಉಪವಾಸ ಮಾಡಿದರೆ, ಆಹಾರಕ್ಕೆ ಬೇಡಿಕೆ ತಗ್ಗುತ್ತದೆ. ಪೂರೈಕೆ ಹೆಚ್ಚಾಗುತ್ತದೆ. ಬೆಲೆ ಇಳಿಯುತ್ತದೆ ಎಂಬ ತಂತ್ರಗಾರಿಕೆಯನ್ನು ಬೊಗಳೂರು ನಿಧಾನಿಗಳು ಉಪಯೋಗಿಸಿರುವುದಾಗಿ ಮೂಲಗಳು ವರದ್ದಿ ತಂದು ಸುರಿದಿವೆ.
ಇದರ ನಡುವೆ, ಅಂತಾರಾಷ್ಟ್ರೀಯ ಸಂಚನ್ನು ಕೂಡ ಬೊಗಳೂರಿನ ಏಕಸದಸ್ಯ ಬ್ಯುರೋದ ಸರ್ವ ಸದಸ್ಯರ ತಂಡವು ಬಯಲಿಗೆಳೆದಿದ್ದು, ಜನಸಂಖ್ಯೆಯಲ್ಲಿ ನಂ.1 ಪಟ್ಟವನ್ನು ತನ್ನಿಂದ ಕಸಿದುಕೊಳ್ಳುವತ್ತ ದಾಪುಗಾಲಿಡುತ್ತಿರುವ ಭಾರತದ ಜನಸಂಖ್ಯೆ ಕಡಿತಗೊಳಿಸಲು ಚೀನಾದ ಷಡ್ಯಂತ್ರಗಳಲ್ಲಿ ಇದೂ ಒಂದಾಗಿದೆ ಎಂದು ನಮ್ಮ ಗುಪ್ತರಲ್ಲದ ಚರರು ತಿಳಿಸಿದ್ದಾರೆ.