ಪಾತಕಿಸ್ತಾನ ಜೊತೆ ಅನರ್ಥಪೂರ್ಣ ಮಾತುಕತೆಗೆ ಸಿದ್ಧ
Tuesday, August 25, 2009
(ಬೊಗಳೂರು ಬಂಬಡಾ ಬ್ಯುರೋದಿಂದ)
ಬೊಗಳೂರು, ಆ.25- ಪಾತಕಿಸ್ತಾನದ ಜೊತೆಗೆ ನಾವು ಟೂ ಬಿಡುತ್ತೇವೆ, ಕೋಪ.... ಮಾತನಾಡುವುದೇ ಇಲ್ಲ ಎಂದು ಭಾರತ ಸ್ಪಷ್ಟಪಡಿಸಿದೆ.ಆದರೂ ಈ ಹುಸಿಮುನಿಸು ಆಗಾಗ್ಗೆ ಶಮನವಾಗಿ, ಎಲ್ಲಾದರೂ ನಮ್ಮ ಕೈಮೀರಿ, ನಮಗರಿವಿಲ್ಲದಂಯೆತೇ ಮಾತುಕತೆ ನಡೆಸಿಬಿಟ್ಟರೆ...? ಎಂಬ ಆತಂಕವೂ ಭಾರತವನ್ನು ಆಳುತ್ತಿರುವವರಿಗಿದೆ. ಹೀಗಾಗಿ, ಪಾತಕಿಸ್ತಾನದೊಂದಿಗೆ "ಅರ್ಥಪೂರ್ಣ" ಮಾತುಕತೆ ಇಲ್ಲ ಎಂಬ ಪದಗುಚ್ಛವನ್ನು ಪತ್ರಿಕಾ ಹೇಳಿಕೆಯೊಳಗೆ ಸೇರಿಸಲಾಗಿದೆ.
ಈ ಮೂಲಕ, ಖಂಡಿತವಾಗಿಯೂ ಪಾತಕಿಸ್ತಾನದ ಜೊತೆಗೆ ಅನರ್ಥಪೂರ್ಣವಾದ ಮಾತುಕತೆ ನಡೆಸುತ್ತೇವೆ ಎಂದು ವಿದೇಶದಅಂಗಿ (ಹಾಕಿಕೊಳ್ಳುವ) ಸಚಿವರು ಸ್ಪಷ್ಟಪಡಿಸಿದ್ದಾರೆ.
ಪಾತಕಿಸ್ತಾನವು ಉಗ್ರರ ವಿರುದ್ಧ ಕ್ರಮ ಕೈಗೊಳ್ಳುವುದಿಲ್ಲ, ಆದರೆ ಕ್ರಮ ಕೈಗೊಂಡಂತೆ ಆಗಾಗ್ಗೆ ಏನೇನೋ ಬಡಬಡಾಯಿಸುತ್ತಿರುತ್ತದೆ ಎಂಬುದನ್ನು ಮನಗಂಡಿರುವ ಬೊಗಳೂರು ಪ್ರಜೆಗಳು, ವಿದೇಶದ ಅಂಗವಾಗಿರುವ ಸಚಿವರ ವಿರುದ್ಧ ಪ್ರತಿಭಟನೆ ನಡೆಸದಿರಲು ತೀರ್ಮಾನಿಸಿದ್ದಾರೆ. ಪ್ರತಿಭಟನೆ ನಡೆಸಿದರೂ ಪ್ರಯೋಜನವಿಲ್ಲ ಎಂಬುದೇ ಅವರ ಈ ತೀರ್ಮಾನಕ್ಕೆ ಕಾರಣ.
ಭಾರತ-ಪಾತಕಿಸ್ತಾನಗಳ ನಡುವಣ ದ್ವಿಪಕ್ಷೀಯ ಸಂಬಂಧಗಳ ವೃದ್ಧಿಗೆ ಎಲ್ಲಾದರೂ "ಧನಾ"ತ್ಮಕ ತಿರುವು ದೊರೆಯುತ್ತದೆಯೋ ಎಂದು ಎರಡೂ ದೇಶಗಳ ರಾಜಕಾರಣಿಗಳು ಕಾಯುತ್ತಿದ್ದಾರೆ. ಈ ಧನ ಲಭ್ಯವಾದಲ್ಲಿ, ಈಗಾಗಲೇ ಭ್ರಷ್ಟ ರಾಜಕಾರಣಿಗಳಿಂದಾಗಿ ಭ್ರಷ್ಟ ದೇಶಗಳ ಪಟ್ಟಿ ಸೇರಿಕೊಂಡುಬಿಟ್ಟಿರುವ ಎರಡು ದೇಶಗಳಿಗೂ ತಮ್ಮ ರ‌್ಯಾಂಕಿಂಗ್ ವೃದ್ಧಿಸಿಕೊಳ್ಳಲು ಸಹಾಯಕವಾಗುತ್ತದೆ ಎಂಬುದು ಅವರ ನಂಬಿಕೆ.
ಪಾತಕಿಸ್ತಾನವು ಭರವಸೆಗಳನ್ನು ಪೂರೈಸುವುದಿಲ್ಲ ಎಂದು ಅಲ್ಲಿನ ಮಂಡೆಗಳ ಕಂಪ್ಯೂಟರುಗಳಲ್ಲಿ ಡೀಫಾಲ್ಟ್ ಪ್ರೋಗ್ರಾಂ ಆಗಿ ಫಿಕ್ಸ್ ಮಾಡಲಾಗಿದೆ. ಆದರೆ, ಅಲ್ಲಿನ ಎಲ್ಲ ಮಂಡೆಗಳು ಕೂಡ ಭರವಸೆಗಳನ್ನು ಧಂಡಿಯಾಗಿ ನೀಡುತ್ತವೆ. ಅಂತಾರಾಷ್ಟ್ರೀಯ ಸಮುದಾಯವನ್ನು ಸಂತುಷ್ಟಗೊಳಿಸಲು ಇದು ಸಾಕಾಗುತ್ತದೆ ಎಂದು ಭಾರತದ ಜಾರಕಾರಣಿಗಳು ಬಲವಾಗಿ ನಂಬಿದ್ದಾರೆ.
ಮುಂಬೈ ಮೇಲಿನ ದಾಳಿಗೆ ಸಂಬಂಧಿಸಿದಂತೆ ಅದೆಷ್ಟೋ ಸಾಕ್ಷ್ಯಾಧಾರಗಳ ಸಹಿತ ಅಜ್ಮಲ್ ಎಂಬ ಕಸ ಸಿಕ್ಕಿಬಿದ್ದಿದ್ದರೂ, ಆತನಿಗೆ ಏನೂ ಆಗದಂತೆ, ಕೋಟ್ಯಂತರ ರೂಪಾಯಿ ಖರ್ಚು ಮಾಡಿ ರಕ್ಷಣೆ ನೀಡುತ್ತಾ, ಬಿರಿಯಾನಿ, ಮಟನ್ ಎಲ್ಲ ನೀಡುತ್ತಾ ಆತನಿಗೆ ಐಷಾರಾಮದ ವ್ಯವಸ್ಥೆ ಮಾಡಿರುವುದು ಯಾಕೆ ಎಂಬುದರ ಕುರಿತು ಸ್ವತಃ ಪಾಕಿಸ್ತಾನವೇ ಅಚ್ಚರಿ ವ್ಯಕ್ತಪಡಿಸಿದೆ ಎಂದು ಮೂಲಗಳು ತಿಳಿಸಿವೆ.
ಉಗ್ರಗಾಮಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳದಿರುವ ಕುರಿತು ಭಾರತದಲ್ಲಿ ಜನಾಕ್ರೋಶವಿದ್ದರೂ, ನಮಗಿಂತ ಯಾರೂ ಮೇಲಲ್ಲ ಎಂದು ಸರಕಾರ ತೋರಿಸಿಕೊಡುತ್ತಿದೆ ಎಂಬುದನ್ನು ಬೊಗಳೂರು ಜನತೆ ಪತ್ತೆ ಹಚ್ಚಿಬಿಟ್ಟಿದ್ದಾರೆ. ಇದರ ಹಿಂದಿರುವ (ಓಟ್) ಬ್ಯಾಂಕಿನ ಕೈವಾಡವನ್ನು ಕೂಡ ತಳ್ಳಿ ಹಾಕಲು ಮೂಲಗಳು ನಿರಾಕರಿಸಿವೆ. ಸದ್ಯಕ್ಕೆ ಓಟುಗಳೆಲ್ಲವನ್ನೂ ಸ್ವಿಸ್ ಬ್ಯಾಂಕಿನಲ್ಲಿ ಭದ್ರ ಮಾಡಿ ಇರಿಸಲಾಗಿದೆ ಎಂಬುದನ್ನು ಕೂಡ ಮೂಲಗಳು ಪತ್ತೆ ಹಚ್ಚಿವೆ. Read more...

