ಅಲ್ಲಲ್ಲಿ ಸ್ಲಮ್, ರಾಷ್ಟ್ರೀಯ ಪ್ರಾಣಿ ಡಾಗ್!
Wednesday, February 25, 2009
(ಬೊಗಳೂರು ಸ್ಲಮ್ಮು ಶೋಧನಾ ಬ್ಯುರೋದಿಂದ)
ಬೊಗಳೂರು, ಫೆ.25- ಸ್ಲಮ್ಮುಗೋಸ್ಕರ' ಪ್ರಶಸ್ತಿ ಲಭಿಸಿರುವುದರಿಂದ ಉತ್ತೇಜಿತವಾಗಿರುವ ಬೊಗಳೂರು ಸರಕಾರ, ಗಲ್ಲಿ ಗಲ್ಲಿಗಳಲ್ಲಿ ಸ್ಲಮ್ಮುಗಳನ್ನು ಸ್ಥಾಪಿಸಲು ಆದೇಶ ಹೊರಡಿಸಿದೆ. ಆದರೆ, ಯಥಾ ಪ್ರಕಾರ ಗೊಂದಲಪುರದಲ್ಲಿರುವ ಕೇಂದ್ರ ಸಚಿವರು, ಆದರೆ, ಗಲ್ಲಿ ಗಲ್ಲಿಗಳಲ್ಲಿ ಸ್ಲಮ್ಮು ಸ್ಥಾಪಿಸಬೇಕೋ ಅಥವಾ ಸ್ಲಮ್ಮು ಸ್ಲಮ್ಮುಗಳಲ್ಲಿ ಗಲ್ಲಿ ಸ್ಥಾಪಿಸಬೇಕೋ ಎಂಬುದಿನ್ನೂ ನಿರ್ಧಾರವಾಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.ಇದರ ಜೊತೆಗೆ ಎಲ್ಲ ಕಡೆಗಳಿಂದಲೂ ಅದು ಬಾಚಿಕೊಳ್ಳುವಲ್ಲಿ ಯಶಸ್ವಿಯಾಗಿರುವುದರಿಂದ ಜಾರಕಾರಣಿಗಳಿಗೆ ಪ್ರೇರಕ ಶಕ್ತಿಯಾಗಿರುವ ಡಾಗನ್ನು ರಾಷ್ಟ್ರೀಯ ಪ್ರಾಣಿಯನ್ನಾಗಿಸಬೇಕೆಂಬ ಕೂಗು ಗಟ್ಟಿಯಾಗಿ ಕೇಳಿಬರತೊಡಗಿದೆ ಎಂಬುದನ್ನು ಬೊ.ರ.ಬ್ಯುರೋ ಮಾತ್ರವೇ ಪತ್ತೆ ಹಚ್ಚಿ ಪ್ರಕಟಿಸಿದೆ.
ಇದಲ್ಲದೆ, ಸದ್ಯದಲ್ಲೇ ಚುನಾವಣೆಗಳು ನಡೆಯಲಿರುವುದರಿಂದ ಎಲ್ಲ ಸ್ಲಮ್ಮುಗಳಲ್ಲಿ ಮನುಷ್ಯರ ಜೊತೆಗಿರುವ ಡಾಗುಗಳಿಗೂ ಮತದಾನದ ಹಕ್ಕು ಕೊಡಿಸಲಾಗುತ್ತದೆ. ಡಾಗುಗಳ ಜನಸಂಖ್ಯೆ ವೃದ್ಧಿಗೆ ಉತ್ತೇಜನ ದೊರಕಿಸಲಾಗುತ್ತದೆ. ಅವುಗಳ ಬಾಯಿ ಮುಚ್ಚಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ. ಆಗ ಬಾಲ ಅಲ್ಲಾಡಿಸಲು ಜಾಗವಿಲ್ಲ ಎಂದು ಕೂಗಾಡಿದವರು, ಈಗ ಬಾಲ ಅಲ್ಲಾಡಿಸಲು ಡಾಗು ಇಲ್ಲ ಎಂದು ಹೇಳುವಂತೆ ಮಾಡಿಸುತ್ತೇವೆ ಎಂದು ಸಚಿವರು ಪಣ ತೊಟ್ಟಿದ್ದಾರೆ.
"ಸ್ಲಮ್ಮುಡಾಗು ಸ್ವೀಪ್ಸ್ ಆಸ್ಕರ್" ಎಂದೇ ಹೆಚ್ಚಿನ ತಾಣಗಳು ತಲೆ ಬರಹ ಕೊಟ್ಟಿರುವುದರಿಂದ ಉತ್ತೇಜಿತರಾಗಿರುವ ಸಚಿವರು, ಸ್ಲಮ್ಮು ಡಾಗುಗಳು ಸ್ವೀಪ್ ಮಾಡುವುದರಲ್ಲಿ ಈಗಾಗಲೇ ಪಳಗಿದ ಕೈ ಎಂಬುದನ್ನು ಮನಗಂಡಿದ್ದಾರೆ. ಆಸ್ಕರನ್ನೇ ಸ್ವೀಪ್ ಮಾಡಿರುವ ಅವುಗಳು ಅಲ್ಪ ಸ್ವಲ್ಪ ಕಸವನ್ನು ಸ್ವೀಪ್ ಮಾಡಲಾರವೇ? ಹೀಗಾಗಿ ಪಟ್ಟಣ ಪ್ರದೇಶಗಳಲ್ಲಿ ರಸ್ತೆ, ಬೀದಿ ಸ್ವೀಪ್ ಮಾಡಲು ಸ್ವೀಪರ್‌ಗಳನ್ನೆಲ್ಲಾ ಕಿತ್ತು ಹಾಕಿ, ಸ್ಲಮ್ಮು ಡಾಗುಗಳನ್ನೇ ನೇಮಿಸುವ ಇರಾದೆಯಲ್ಲಿದ್ದಾರೆ.
ಇದಲ್ಲದೆ, PM, President congratulates Slumdog, Everybody is hailing Slumdog, Rejoice/wishes galore for Slumdog ಮುಂತಾದ ತಲೆಬರಹಗಳು ಕಣ್ಣು ಕುಕ್ಕಿದ್ದು ಮತ್ತು ಸ್ವೀಪರ್ ಕೆಲಸಗಳಿಗೆ ಸ್ಲಮ್ಮು ಡಾಗುಗಳ ನೇಮಕಕ್ಕೆ ತೀವ್ರ ಪ್ರತಿರೋಧ ಎದುರಾಗಿದ್ದು ಬೊಗಳೂರಿನ ಸ್ಲಮ್ಮು ಮಂಕಿಗಳಿಂದ. ಇಷ್ಟು ವರ್ಷದಿಂದ ನಾವು ಇಷ್ಟೆಲ್ಲಾ ಹಾರಾಡುತ್ತಾ, ಕೂಗಾಡುತ್ತಾ, ಬೊಗಳಾಡುತ್ತಾ ಇದ್ದರೂ, ನಮ್ಮನ್ನು ಯಾರೂ ಗುರುತಿಸಿಲ್ಲ, ಸ್ಲಮ್ಮು ಡಾಗುಗಳನ್ನು ಮಾತ್ರವೇ ಗುರುತಿಸಲಾಗಿದೆ ಎಂದು ಮಂಕಿ ಸಮುದಾಯ ರೊಚ್ಚಿಗೆದ್ದಿದೆ. ಹೀಗಾಗಿ ನಮಗೂ ಆಸ್ಕರು ದೊರಕಿಸಬೇಕು, ಇಲ್ಲವಾದಲ್ಲಿ ಕನಿಷ್ಠ ಪಕ್ಷ ಕೇಂದ್ರ ಸಚಿವ ಆಸ್ಕರು ಫೆರ್ನಾಂಡಿಸ್ ಕೈಯಲ್ಲಾದರೂ ಪ್ರಶಸ್ತಿ ಕೊಡಿಸಬೇಕು ಎಂದು ದುಂಬಾಲು ಬಿದ್ದು, ಬೊಗಳೂರು ಬೊಗಳೆ ಬ್ಯುರೋದೆದುರು ಪ್ರತಿಭಟನೆ ಮಾಡುತ್ತಾ ಪ್ರದರ್ಶನವನ್ನೂ ಮಾಡತೊಡಗಿವೆ. ಸ್ಲಮ್ಮು ಡಾಂಕಿಗಳು ಕೂಡ ಇದಕ್ಕೆ ತಮ್ಮ ಅಮೂಲ್ಯವಾದ ಗಾರ್ದಭ ಧ್ವನಿಗೂಡಿಸಿವೆ.
ಈ ಮಧ್ಯೆ, ಜೈ ಹೋ ಎಂಬ ಹಾಡನ್ನೇ ರಾಷ್ಟ್ರಗೀತೆಯಾಗಿ ಮಾಡಬೇಕು ಎಂಬ ಕೂಗು ಕೂಡ ಕೇಳಿಬರತೊಡಗಿದೆ. ಇದಕ್ಕೆ ಕಾರಣವೆಂದರೆ, ಶೀಘ್ರದಲ್ಲೇ ಚುನಾವಣೆ ಬರಲಿವೆ. ತಾವು ಐದು ವರ್ಷ ಸಂಸತ್ತಿನಲ್ಲಿ ಗಲಾಟೆ, ಗದ್ದಲ ಮಾಡುತ್ತಾ ತೆರಿಗೆದಾರರ ಹಣವನ್ನು ಆರಾಮವಾಗಿ ನುಂಗುತ್ತಾ ಕಾಲ ಕಳೆದಿರುವುದೆಲ್ಲಾ ಈ ಟಿವಿಗಳ ಹಾವಳಿಯಿಂದ ಜಗಜ್ಜಾಹೀರಾಗಿದೆ, ಮತದಾರರೂ ರೊಚ್ಚಿಗೆದ್ದು ಪಾಠ ಕಲಿಸಲು ಸಿದ್ಧರಾಗುತ್ತಿದ್ದಾರೆ. ಟಿವಿ ಚಾನೆಲ್ಲುಗಳೆಲ್ಲವೂ ತಮ್ಮ ಬಂಡವಾಳ ಬಯಲು ಮಾಡಿವೆ. ಇದರಿಂದಾಗಿ ಚುನಾವಣೆಗೆ ಮುನ್ನ ಜೈ ಹೋ ಜೈ ಹೋ ಎಂದು ಹಾಡುತ್ತಾ ಆರಿಸಿ ಕಳುಹಿಸಿದ ಜನರು ಈ ಬಾರಿ ನಮ್ಮ ನಾಯಕನಿಗೆ... ಜೈಲ್ ಹೋ ಜೈಲ್ ಹೋ ಎಂದು ಹಾಡುವ ಆತಂಕವಿದೆ.
ಈ ಸಂಕಷ್ಟಮಯ ಪರಿಸ್ಥಿತಿಯನ್ನು ಮನಗಂಡು, ಜೈ ಹೋವನ್ನು ರಾಷ್ಟ್ರಗೀತೆಯಾಗಿಸಬಹುದು, ತಪ್ಪು ತಪ್ಪಾಗಿ ಜೈಲ್ ಹೋ ಎಂದರೆ ಅವರನ್ನು ಕಠಿಣ ಶಿಕ್ಷೆಗೆ ಗುರಿಪಡಿಸಬಹುದು ಎಂಬುದು ಈ ಜಾರಕಾರಣಿಗಳ ಹುನ್ನಾರ ಎಂಬುದನ್ನು ಪತ್ತೆ ಹಚ್ಚಲಾಗಿದೆ.
ಅಲ್ಲಲ್ಲಿ ಕೇಳಿ ಬಂದ ಮತ್ತಷ್ಟು ಹೇಳಿಕೆಗಳನ್ನು ಹೆಕ್ಕಿಕೊಳ್ಳಲಾಗಿದ್ದು, ಅವುಗಳನ್ನು ಪಟ್ಟಿ ಇಂತಿದೆ:
* ಮತ್ತೆ ಮತ್ತೆ ಸ್ಲಂ ಫಿಲ್ಮ್ ಮಾಡುತ್ತೇನೆ: ನಿರ್ದೇಶಕ ಡ್ಯಾನಿ boil.
* ಸ್ಲಮ್ಮಿನಲ್ಲಿರುವ Hot dog ಗಳನ್ನು ರಾಷ್ಟ್ರೀಯ ಖಾದ್ಯ ಎಂದು ಘೋಷಿಸಬೇಕು : ಕೂಲ್ ಡಾಗ್
* ನಮಗೂ ಸ್ಲಮ್ಮಿನ ಸ್ಥಾನ-ಮಾನ ನೀಡಬೇಕು: ಸ್ಲಂ ಕ್ಯಾಟ್
* ಸ್ಲಮ್ಮು ಡಾಗನ್ನು ನಮಗೊಪ್ಪಿಸಿ, ನಾವೇ ತನಿಖೆ ಮಾಡುತ್ತೇವೆ: ಪಾತಕಿಸ್ತಾನದ ಗೊಂದಲಭರಿತ ಸರಕಾರ
* ಸ್ಲಂ ಡಾಗ್‌ಗೆ ಆಸ್ಕರ್ ಪ್ರಶಸ್ತಿ ಬಂದಿದ್ದು ಯುಪಿಎ ಸಾಧನೆ: ಚುನಾವಣೆಗೆ ಸಜ್ಜಾದ ರಾಜಕಾರಣಿ
* ಮುಂದಿನ ಚುನಾವಣೆಗೆ ಸ್ಲಂ ಡಾಗನ್ನೇ ಪಕ್ಷದ ಚಿಹ್ನೆಯಾಗಿಸುತ್ತೇವೆ: ಬೂಮ್‌ಗಾರಪ್ಪ.
ಈ ಮಧ್ಯೆ, ಬಡ ಬೊಗಳೇಗೌಡರು ವಿಶೇಷ ಪತ್ರಿಕಾಗೋಷ್ಠಿಯೊಂದನ್ನು ನಡೆಸಲು ದುಡ್ಡಿಲ್ಲದ ಕಾರಣ, ಬೊ.ರ. ಕಚೇರಿಗೆ ಹೊಕ್ಕು ಹೇಳಿಕೆಯೊಂದನ್ನು ನೀಡಿದ್ದಾರೆ. ಅದೆಂದರೆ, ಆಸ್ಕರ್ ಸಿಗಬೇಕಾಗಿರುವುದು ಸ್ಲಂ ಡಾಗಿಗೆ ಅಲ್ಲ, ದೇಶದ ಮೂಲೆ ಮೂಲೆಯನ್ನೂ ಸ್ಲಮ್ ಮಾಡಿರುವ ನಮ್ಮ ಜಾರಕಾರಣಿಗಳಿಗೆ! Read more...


