ಉಗ್ರರಿಗೂ ಮತದಾನದ ಹಕ್ಕು: ಕೇಂದ್ರ ಚಿಂತನೆ
Monday, September 29, 2008
(ಬೊಗಳೂರು ಓಟಿನ ಬ್ಯಾಂಕು ಬ್ಯುರೋದಿಂದ)
ಬೊಗಳೂರು, ಸೆ.29- ಭಯೋತ್ಪಾದಕರಿಗೂ ಮತದಾನ ಹಕ್ಕು ನೀಡಲು ಕೇಂದ್ರ ಗೃಹದೊಳಗಿರುವ ಸಚಿವಾಲಯಕ್ಕೆ ಶಾಸನ ರೂಪಿಸಲು ತೀವ್ರ ಒತ್ತಡ, ಸಲಹೆ, ಮನವಿ ಇತ್ಯಾದಿಗಳು ಕೇಳಿಬರುತ್ತಿರುವುದು ಬೊಗಳೆ ರಗಳೆ ಬ್ಯುರೋದ ವ-ರದ್ದಿಗಾರರ ಕಿವಿಗೆ ಬಿದ್ದಿದೆ.ಇದಕ್ಕೆ ಮೂಲ ಪ್ರೇರಣೆ ದುರ್ಜನ ಸಿಂಗರು ಕೈಗೊಳ್ಳುತ್ತಿರುವ ನಿರ್ಧಾರಗಳು. ತಮ್ಮ ಓಟಿನ ಬ್ಯಾಂಕುಗಳು ಇತ್ತೀಚೆಗೆ ಜೈಲು ಸೇರುತ್ತಿರುವುದರಿಂದ ತೀವ್ರ ಕಳವಳಗೊಂಡಿರುವ ಸರಕಾರವು, ಇನ್ನು ಮುಂದೆ ಚುನಾವಣೆಯಲ್ಲಿ ಜಯಿಸುವುದಾದರೂ ಹೇಗೆ ಎಂದು ಚಿಂತಾಕ್ರಾಂತವಾಗಿ ಕುಳಿತಿದ್ದಾಗ, ಅರ್ಜುನನಿಗೆ ಅಭಿಮನ್ಯುವಿನಿಂದ ದೊರೆತ ಮಾದರಿಯ ಸಲಹೆಯೊಂದು ಛಕ್ಕಂತ ಸರಕಾರದ ಅಂಗಳದಲ್ಲಿ ಬಂದು ಬಿದ್ದಿದೆ.
ಸ್ವತಃ ದುರ್ಜನ ಸಿಂಗರೇ ಇದರಿಂದ ಕಕ್ಕಾಬಿಕ್ಕಿಯಾಗಿ, ಈ ಸಲಹೆ ಬಿದ್ದದ್ದೆಲ್ಲಿಂದ ಎಂದು ಸಾವರಿಸಿಕೊಳ್ಳುವಷ್ಟರಲ್ಲಿ, ಶಾಸನ ರೂಪಿಸಲು ಎಲ್ಲ ರೀತಿಯ ಸಿದ್ಧತೆಗಳನ್ನೂ ಮಾಡಲಾಗಿದೆ ಎಂದು ಮೂಲಗಳು ವರದ್ದಿ ಮಾಡಿವೆ.
ಇದರ ನಡುವೆಯೇ, ತಮ್ಮ ಗೃಹದ ಹೊರಗೆ ಮತ್ತೆ ಮತ್ತೆ ಪಟಾಕಿಗಳು ಸಿಡಿಯುತ್ತಿರುವುದು ಗೃಹದ ಸಚಿವರ ಗಮನಕ್ಕೆ ಬರುವ ವೇಳೆಗೆ ಆ ಸುದ್ದಿಯ Expiry date ಮುಗಿದಿರುತ್ತದೆ. ಹೀಗಾಗಿ, ಅವರು ಗೃಹದ ಒಳಗಿಂದ ಹೊರಗೆ ಬಂದು, "ಹೌದಾ, ಸಿಡಿದದ್ದು ಪಟಾಕಿಯೇ? ಬಹುಶಃ ದೀಪಾವಳಿ ಸಮೀಪಿಸುತ್ತಿದೆಯಲ್ಲ, ಅದೇ ಇರಬೇಕು" ಎಂದು ತಮ್ಮನ್ನು ಭೇಟಿಯಾದ ಸುದ್ದಿಗಾರರಿಂದಲೇ ಸ್ಪಷ್ಟನೆ ಕೇಳಿದ್ದಾರೆ.
ನಾಲ್ಕು ಹೆಜ್ಜೆ ಮುಂದುವರಿದು ಮಾತನಾಡಿದ ಅವರು, ತಮ್ಮ ಕಾರಿನತ್ತ ತಲುಪಿ, "ನಾವು ಅಲ್ಪ ಸಂಖ್ಯಾತರನ್ನು ರಕ್ಷಿಸಬೇಕು. ಪಾಪ, ಅವರು ಈ ದೇಶದಲ್ಲಿ ಅದೆಷ್ಟು ಭೀತಿಯ ವಾತಾವರಣದಲ್ಲಿ ಬದುಕುತ್ತಿದ್ದಾರೆ. ನೆರೆಯ ಪಾಕಿಸ್ತಾನದಲ್ಲೂ ನಮ್ಮಲ್ಲಿದ್ದಂಥದ್ದೇ ಸಮಸ್ಯೆಯಿದೆ. ನಾವಂತೂ ಭಾರತದಲ್ಲಿ ಅವರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಕಟಿಬದ್ಧರಾಗಿದ್ದೇವೆ. ಅವರಿಗೆ ನಾವು ರಕ್ಷಣೆ ಕೊಡದಿದ್ದರೆ, ಬೇರೆ ಯಾರು ಕೊಡುತ್ತಾರೆ? ಉಳಿದ ಎಲ್ಲ ಪಕ್ಷದವರೂ ಭಾರತದಲ್ಲಿರುವವರ ಪರವಾಗಿಯೇ ಮಾತನಾಡುತ್ತಿವೆ. ನಾವಾದರೂ ಇವರ ಬಗ್ಗೆ ಕಾಳಜಿ ತೆಗೆದುಕೊಳ್ಳಬೇಡ್ವೇ" ಎಂದು ಪ್ರಶ್ನಿಸಿದ್ದಾರೆ.
ಉಗ್ರಗಾಮಿಗಳೆಲ್ಲರನ್ನೂ ಭಯೋತ್ಪಾದಕರೆಂದು ದೂರವಿಡಲಾಗುತ್ತದೆ. ಅವರಿಗೆ ಮತದಾನದ ಹಕ್ಕನ್ನೂ ನಿರಾಕರಿಸುತ್ತಿರುವುದು ನಮ್ಮ ದೇಶದ ಸಾರ್ವಭೌಮತೆಗೆ ಧಕ್ಕೆ ತರುವ ಸಂಗತಿ. ಪಟಾಕಿ ಸ್ಫೋಟಿಸಿದ ಕೆಲವರನ್ನಂತೂ ಜೈಲಿಗೆ ತಳ್ಳಲಾಗುತ್ತಿದೆ. ಅವರೂ ಮಾನವರೇ ಅಲ್ಲವೇ? ಅವರಿಗೂ ಮಾನವೀಯತೆ ತೋರಿಸಬೇಡವೇ? ಓಟಿನ ಸಮಯದಲ್ಲಾದರೂ ಅವರಿಗೆ ಒಂದಷ್ಟು ಕ್ಷಣಗಳ ಕಾಲ ಹೊರಗೆ ಬಂದು ಮತ ಚಲಾಯಿಸುವಂತಾಗಲು, ಅದಕ್ಕೆ ಪೂರಕವಾದ ಕಾನೂನು ನಮ್ಮ ಮುಂದಿದೆ ಎಂದು ಕೇಂದ್ರದ ವಕ್ತಾರರು ಬೇರೆಲ್ಲಾ ಪತ್ರಿಕೆಗಳನ್ನು ಬಿಟ್ಟು, ಬೊಗಳೆ ರಗಳೆ ಬ್ಯುರೋದ ರದ್ದಿಗಾರರಿಗೂ ತಿಳಿಸದೆ ಪತ್ರಿಕಾ ಗೋಷ್ಠಿಯಲ್ಲಿ ವಾದಿಸಿದ್ದಾರೆ. Read more...

