ಪೊಲೀಸ್ ನಿಷ್ಕ್ರಿಯ ದಳ, ಸಾಕುನಾಯಿ ದಳ ಸ್ಥಾಪನೆ
Wednesday, July 30, 2008
(ಬೊಗಳೂರು ನಿಷ್ಕ್ರಿಯ ಬ್ಯುರೋದಿಂದ)
ಬೊಗಳೂರು, ಜು.೩೦- ಭಯೋತ್ಪಾದಕರನ್ನು ಮತ್ತು ಉಗ್ರವಾದವನ್ನು ಮಟ್ಟ ಹಾಕುವ ಪೊಲೀಸರ ಕ್ರಮವನ್ನು ಖಡಾಖಂಡಿತವಾಗಿ ಖಂಡಿಸಿರುವ ಅಖಿಲ ಭಾರತ ಓಟು ಓಲೈಕೆ ಪಕ್ಷವು, ಅಲ್ಲಲ್ಲಿ ಬಾಂಬ್ ಸ್ಫೋಟಿಸುತ್ತಾ, ರಕ್ತ ಪಾತ ಮಾಡುತ್ತಾ, ಕಾಶ್ಮೀರದಲ್ಲಿ ಸದಾ ಹಿಂಸಾಚಾರದಲ್ಲಿ ತೊಡಗುತ್ತಾ, ಬಾಂಬುಗಳ ಸಹಿತವಾಗಿ ಪತ್ತೆಯಾಗುತ್ತಿರುವ 'ಮತದಾರರನ್ನು' ಪತ್ತೆ ಹಚ್ಚುವುದಕ್ಕಾಗಿ ಪೊಲೀಸ್ ನಿಷ್ಕ್ರಿಯ ದಳಗಳನ್ನು ರಚಿಸುವ ಪ್ರಸ್ತಾಪ ಮುಂದಿಟ್ಟಿದೆ.ಭಯೋತ್ಪಾದಕರನ್ನು ಪತ್ತೆ ಹಚ್ಚಿದರೆ ಮತ್ತು ಅವರನ್ನು ಬಂಧಿಸಿದರೆ, ಶೀಘ್ರವೇ ನಡೆಯಲಿರುವ ಚುನಾವಣೆಗಳಲ್ಲಿ ನಮಗೆ ಮತ ಹಾಕುವವರಾರು ಎಂಬ ಸಂದಿಗ್ಧತೆಗೆ ಸಿಲುಕಿರುವ ಅಭಾಓಓ ಪಕ್ಷ, ಪೊಲೀಸ್ ನಿಷ್ಕ್ರಿಯ ದಳದ ರೂಪು ರೇಷೆ ತಯಾರಿಸಿದೆ.
ಅದರ ಪ್ರಕಾರ, ಪೊಲೀಸ್ ನಿಷ್ಕ್ರಿಯ ದಳಕ್ಕೆ ನ್ಯೂಟನ್ ನಿಯಮ, ಐನ್‌ಸ್ಟೀನ್ ಸೂತ್ರ ಹಾಗೂ ದೇಶದ ಹೆಸರಾಂತ ಜಾರಕಾರಣ ವಿಜ್ಞಾನದ ವಿಶಿಷ್ಟ ಸೂತ್ರವನ್ನು ಕೂಡ ರೂಪಿಸಲಾಗಿದೆ.
ನ್ಯೂಟನ್ ನಿಯಮದ ಪ್ರಕಾರ, ಭಯೋತ್ಪಾದಕರು ದಾಳಿ ಮಾಡಲು ಅವಕಾಶ ಮಾಡಿಕೊಡಬೇಕು. ಆಗ ಭಯೋತ್ಪಾದಕರು ತಾವಾಗಿಯೇ ಬಲೆಗೆ ಬೀಳುವಂತಾಗುತ್ತದೆ. ಸಿಕ್ಕಿದರೆ 'ಯುರೇಕಾ' ಎನ್ನುತ್ತಾ, ಭಯೋತ್ಪಾದಕರನ್ನು ಹಿಂದಿಕ್ಕುವ ಭರದಲ್ಲಿ ಅವರನ್ನು ಅಲ್ಲೇ ಬಿಟ್ಟು ಓಡಬಹುದು.
ಐನ್‌ಸ್ಟೀನ್ ನಿಯಮದ ಪ್ರಕಾರ, ಬಾಂಬು ಇಡಲು ಬರುವ ಉಗ್ರಗಾಮಿಗಳನ್ನು ಬೆನ್ನಟ್ಟಬೇಕು. ಉಗ್ರರಿಗೆ ಓಡಿ ಓಡಿ ಸಾಕು ಸಾಕಾಗುವವರೆಗೂ ಓಡಿಸಬೇಕು. ಕೊನೆಗೆ ಆಯಾಸದಿಂದ ಅವರು ಬೀಳುತ್ತಾರೆ. ಆಗ ಶಕ್ತಿಗುಂದಿದ ಅವರನ್ನು (ನಮಗೆ ಶಕ್ತಿಯಿದ್ದರೆ) ಹಿಡಿಯುವುದು ಸುಲಭ.
ವಿಶಿಷ್ಟ ಮತ್ತು ವಿಶೇಷವಾದ ಜಾರಕಾರಣ ನಿಯಮದ ಪ್ರಕಾರ, ದಾಳಿ ನಡೆದಾಗ ಯಾರಾದರೊಬ್ಬರನ್ನು ಬಂಧಿಸಲೇಬೇಕಲ್ಲ... ಇದಕ್ಕಾಗಿ ಒಬ್ಬ ಮುಗ್ಧನನ್ನು ಬಂಧಿಸಿಡಬೇಕು. "ಅಯ್ಯೋ... ಬಿಟ್ಬಿಡಿ.... ನನ್ನೇನೂ ಮಾಡ್ಬೇಡಿ... ನಾನು ಉಗ್ರಗಾಮಿ ಅಂತ ಒಪ್ಪಿಕೊಳ್ತೀನಿ" ಅಂತ ಗೋಗರೆಯುವವರೆಗೂ ಚೆನ್ನಾಗಿ 'ಪೊಲೀಸ್ ಟ್ರೀಟ್‌ಮೆಂಟ್' ಕೊಟ್ಟಾಗ ನಮಗೊಬ್ಬ ಭಯೋತ್ಪಾದಕ ಸಿಕ್ಕಿದಂತಾಗುತ್ತದೆ!
ಇದರೊಂದಿಗೆ, ಬಾಂಬ್ ಪತ್ತೆಗೆ ಮತ್ತು ಅವುಗಳನ್ನಿರಿಸಿದವರ ಶೋಧಕ್ಕೆ ಶ್ವಾನ ದಳಗಳನ್ನು ಸುಖಾಸುಮ್ಮನೆ ದುಡಿಸಿಕೊಳ್ಳಲಾಗುತ್ತಿದೆ. ಅವುಗಳು ನಿಷ್ಠೆಗೆ ಹೆಸರಾಗಿರುವ ಪ್ರಾಣಿಗಳಾಗಿರುವುದರಿಂದ ಮತ್ತು ಅವುಗಳಿಗೆ ಯಾವುದೇ ಆಮಿಷ ನೀಡುವುದು ಸಾಧ್ಯವಿಲ್ಲ. ಅವುಗಳು ನಿಷ್ಪಕ್ಷಪಾತವಾಗಿ ಶೋಧನೆ ಮಾಡುತ್ತವೆಯಾದುದರಿಂದ, ನಮ್ಮ ಬಂಡವಾಳಗಳು ಹೊರಗೆ ಬರದಂತಾಗಲು, ಈ ಶ್ವಾನ ದಳಗಳಲ್ಲಿ ನಾಯಿಗಳ ಬದಲು ನಮ್ಮ ಪಕ್ಷದ ಮುಖಂಡರಿಗೇ ಅವಕಾಶ ನೀಡಬೇಕು ಎಂದೂ ಆಗ್ರಹಿಸಲಾಗಿದೆ. ಅದು ಶ್ವಾನದಳವೇ ಆಗಬೇಕೂಂತ ಇದ್ದರೆ, ಈ ಮುಖಂಡರು ತಮ್ಮ ಜೊತೆ ಮನೆಯಲ್ಲಿರುವ ಸಾಕುನಾಯಿಗಳನ್ನೂ ಒಯ್ಯುತ್ತಾರೆ ಎಂಬ ವಾಕ್ಯವನ್ನೂ ಈ ಪಕ್ಷವು ಸೇರಿಸಿದೆ. Read more...

